ಬೆಂಗಳೂರು, ಎ.28 (Daijiworld News/MB) : ಕೊರೊನಾ ಲಾಕ್ಡೌನ್ನಿಂದ ಹಲವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಸಾಂಪ್ರದಾಯಿಕ ವೃತ್ತಿ ಮಾಡುವವರೂ ಸೇರಿದಂತೆ ಶ್ರಮಿಕ ವರ್ಗದವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಎಮದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಆಗ್ರಹಿಸಿದ್ದು ಶ್ರಮಿಕ ವರ್ಗದವರಿಗಾಗಿ ವಿಶೇಷ ಯೋಜನೆ ರೂಪಿಸದಿದ್ದಲ್ಲಿ ಲಾಕ್ಡೌನ್ ಮುಗಿದ ಕೂಡಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಮಂಗಳವಾರ ಸಿದ್ಧರಾಮಯ್ಯ ಅವರು ಸಾಂಪ್ರದಾಯಿಕ ವೃತ್ತಿ ಮಾಡುವ ವಿವಿಧ ಸಮುದಾಯಗಳು ಹಾಗೂ ಆಟೋ, ಟ್ಯಾಕ್ಸಿ ಸೇರಿದಂತೆ ವಿವಿಧ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಲಾಕ್ಡೌನ್ನಿಮದ ಈ ವರ್ಗಕ್ಕೆ ಆಗುತ್ತಿರುವ ಕಷ್ಟಗಳ ಬಗ್ಗೆ ಚರ್ಚೆ ಮಾಡಿದ್ದು ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಪ್ರಾರಂಭವಾಗಿ ಒಂದು ತಿಂಗಳು ಕಳೆದಿದೆ. ಶ್ರಮಿಕ ವರ್ಗಗಳು ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಿ ಎಮದು ಹಲವು ಬಾರಿ ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದ್ದೇನೆ. ಸುಮಾರು 18 ರಇಂದ 20 ಕೋಟಿ ಇದಕ್ಕಾಗಿ ಬಳಸಬೇಕಾಗುತ್ತದೆ. ಆದರೆ ಸರಕಾರ ಅದಕ್ಕೂ ಹಿಂಜರಿಯುತ್ತಿದೆ ಎಂದು ಹೇಳಿದರು.
ಸರ್ಕಾರ ಈಗ ನೀಡುತ್ತಿರುವ ಧವಸ ಧಾನ್ಯದ ಕಿಟ್ ಕೂಡಾ ಎಲ್ಲರಿಗೂ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಅದನ್ನು ಬಿಟ್ಟು ಈ ಸಂದರ್ಭದಲ್ಲೂ ನಾವು ರಾಜೀಕ ಮಾಡುವುದಿಲ್ಲ. ಆ ಕಾರಣದಿಂದ ಲಾಕ್ಡೌನ್ ಮುಗಿದ ಬಳಿಕವೇ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಭೆಯನ್ನು ಸಕಾರ ಈ ವರ್ಗಕ್ಕೆ ಯಾವುದಾದರೂ ಸಹಾಯ ಮಾಡಿದೆಯೇ ಎಂದು ತಿಳಿಯುವ ನಿಟ್ಟಿನಲ್ಲಿ ಕರೆಯಲಾಗಿತ್ತು. ಆದರೆ ಸಕಾರದಿಮದ ನಮಗೆ ಯಾವ ಸಹಾಯವೂ ಬಂದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ. ಲಾಕ್ಡೌನ್ ಬಳಿಕವೂ ಉಂಟಾಗಬಹುದಾದ ಸಮಸ್ಯೆಯ ಬಗ್ಗೆ ಎಲ್ಲರೂ ಆತಂಕ ಪಟ್ಟಿದ್ದಾರೆ ಎಂದು ಹೇಳಿದರು.
20 ಲಕ್ಷದಷ್ಟು ಸಂಘಟಿತ ಕಾರ್ಮಿಕರು ಇದ್ದಾರೆ. ಆದರೆ 12 ಲಕ್ಷ ಮಂದಿಗೆ ಮಾತ್ರವೇ ಸರ್ಕಾರ ಕಾರ್ಮಿಕ ಕಲ್ಯಾಣ ನಿಧಿಯಿಂದ 2 ಸಾವಿರ ರೂ. ಗಳ ಸಹಾಯಧನ ನೀಡಿದೆ. ಉಳಿದವರಿಗೆ ಲೈಸೆನ್ಸ್ ನವೀಕರಿಸಿಲ್ಲ ಎಂದು ಕಾರಣ ಹೇಳಿ ಸಹಾಯಧನ ನೀಡಿಲ್ಲ. ಅಷ್ಟು ಮಾತ್ರವಲ್ಲದೇ ಅಸಂಘಟಿತ ಕಾರ್ಮಿಕರಿಗೆ ಯಾವ ನೆರವು ಕೂಡಾ ಲಭಿಸಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಮಾತ್ರ ಕೆಲವು ಕಾರ್ಮಿಕರಿಗೆ ಮಾತ್ರ ಆಹಾರದ ಪ್ಯಾಕೇಟ್ ನಿಡಲಾಗುತ್ತಿದೆ. ಬೆಂಗಳೂರಿನಲ್ಲಿ ಈ ವಿಚಾರವಾಗಿಯೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಇನ್ನು ಬರುವ ಪಾಲಿಕೆ ಚುನಾವಣೆಯನ್ನು ಗಂನದಲ್ಲಿಟ್ಟುಕೊಂಡು ಈ ರೀತಿಯಾಗಿ ಮಾಡುತ್ತಿದ್ದಾರೆ ಎಂದು ದೂರಿದರು.
ಇನ್ನು ಸೆಲೂನ್ಗಳು ಕೂಡಾ ಬಂದ್ ಆಗಿರುವ ಕಾರಣ ಸವಿತಾ ಸಮಾಜದವರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಡಿವಾಳರು, ಕುಂಬಾರರು, ಅಕ್ಕಸಾಲಿಗರು, ಗಾಣಿಗರೂ ಕೂಡಾ ಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಹಾಗೆಯೇ ರಸ್ತೆ ತೆರಿಗೆ, ಮಾಸಿಕ ಕಂತು, ವಿಮೆ ಕಂತು, ವಿಮಾನ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಸಲು ನಮ್ಮಿಂದ ಅಸಾಧ್ಯ. ಅದನ್ನು ಮನ್ನಾ ಮಾಡಬೇಕು ಎಂದು ಟ್ಯಾಕ್ಸಿ ಚಾಲಕರು, ಮಾಲೀಕರು ಸಭೆಯಲ್ಲಿ ತಿಳಿಸಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಾಗುವುದು ಎಂದು ಹೇಳಿದರು.
ಗುರುವಾರ, ಲಾಕ್ಡೌನ್ನಿಂದ ರೈತರು, ಕಾರ್ಮಿಕರು, ಮಧ್ಯಮ ವರ್ಗದವರು, ಶ್ರಮಿಕ ವರ್ಗದವರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕರ ಸಭೆ ಕರೆದಿದ್ದೇವೆ. ಇದರಲ್ಲಿ ಸಿಪಿಐಎಂ, ಸಿಪಿಐ, ಜೆಡಿಎಸ್, ಜೆಡಿಯು, ಬಿಎಸ್ಪಿ, ರೈತ ಸಂಘಟನೆಗಳ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.