ನವದೆಹಲಿ,ಏ 28 (Daijiworld News/MSP): ದೇಶದ ವಿವಿಧೆಡೆ ಕಳೆದ 24 ಗಂಟೆಯಲ್ಲಿ 1,543 ಹೊಸ ಕೊರೋನಾ ಸೋಂಕಿತ ಪ್ರಕರಣ ಪತ್ತೆಯಾಗುವ ಮೂಲಕ, ದೇಶದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರ ಸಮೀಪಕ್ಕೆ ಬಂದು ನಿಂತಿದೆ.
ಈ ಬಗ್ಗೆ ಪ್ರತಿನಿತ್ಯದ ಮಾಧ್ಯಮಗೋಷ್ಟಿಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 1,543 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,435ಕ್ಕೆ ಏರಿಕೆಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಇನ್ನೂ ಕಳೆದ 28 ದಿನಗಳಿಂದ ದೇಶದ 17 ಜಿಲ್ಲೆಗಳಲ್ಲಿ ಯಾವುದೇ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಕಳೆದ 24 ಗಂಟೆಯಲ್ಲಿ 684 ಕೊರೊನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆ. ಇದುವರೆಗೆ ಒಟ್ಟಾರೆ 6,686 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಫ್ಲಾಸ್ಮಾ ಥೆರಫಿ ಬಗ್ಗೆ ಮಾತನಾಡಿದ ಅವರು. ಪ್ಲಾಸ್ಮಾ ಥೆರಪಿ ಸಾಬೀತಾಗಿರುವ ಚಿಕಿತ್ಸೆಯಲ್ಲ ಮತ್ತು ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಕೆಲ ರಾಜ್ಯಗಳಿಗಷ್ಟೇ ಐಸಿಎಂಆರ್ ಅನುಮತಿ ನೀಡಿದೆ. ಜಗತ್ತಿನಲ್ಲಿ ಕೊರೊನಾಗೆ ಸದ್ಯ ಯಾವುದೇ ಚಿಕಿತ್ಸೆಯಿಲ್ಲ. ಪ್ಲಾಸ್ಮಾ ಚಿಕಿತ್ಸೆಯು ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ ಮತ್ತು ಇದನ್ನು ಚಿಕಿತ್ಸೆಯಾಗಿ ಬಳಸಲು ಯಾವುದೇ ಪುರಾವೆಗಳಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಈ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡುತ್ತಿದೆ. ಸಂಶೋಧನೆ ಅಥವಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಐಸಿಎಂಆರ್ ತನ್ನ ಅಧ್ಯಯನವನ್ನು ಮುಕ್ತಾಯಗೊಳಿಸುವವರೆಗೆ ಮತ್ತು ದೃಢವಾದ ವೈಜ್ಞಾನಿಕ ಪುರಾವೆ ಲಭ್ಯವಾಗುವವರೆಗೆ, ಪ್ಲಾಸ್ಮಾ ಚಿಕಿತ್ಸೆಯನ್ನು ಮಾತ್ರ ಬಳಸಬೇಕು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.