ಲಖನೌ, ಎ.29 (Daijiworld News/MB) : ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ವಿರುದ್ಧದ ನಡುವೆಯೂ ಕೋಮುವಾದ ಮಾಡಬೇಡಿ, ಸಾಂಕ್ರಾಮಿಕ ರೋಗದಲ್ಲೂ ಕೂಡಾ ಕೋಮುವಾದ ಸೃಷ್ಟಿಸಬೇಡಿ ಎಂದು ತಿಳಿಸಿದ್ದಾರೆ. ಆದರೆ ಉತ್ತರ ಪ್ರದೇಶದ ಶಾಸಕರೊಬ್ಬರು "ಮುಸ್ಲಿಂ ವ್ಯಾಪಾರಿಗಳಿಂದ ಯಾರೂ ಕೂಡಾ ತರಕಾರಿ ಖರೀದಿಸಬೇಡಿ" ಎಂದು ಹೇಳಿ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಉತ್ತರ ಪ್ರದೇಶ ಬರ್ಹಾಜ್ ಕ್ಷೇತ್ರದ ಶಾಸಕರಾಗಿರುವ ಸುರೇಶ್ ತಿವಾರಿ ಈ ಮಾತುಗಳನ್ನು ಆಡಿದ್ದು ಮಂಗಳವಾರ ವೈರಲ್ ಆಗಿದೆ.
ಇನ್ನು ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಹೇಳಿಕೆಯನ್ನು ಸಮರ್ಥನೆ ಮಾಡಿರುವ ಅವರು, ಮುಸ್ಲಿಂ ವ್ಯಾಪಾರಿಗಳು ತರಕಾರಿಗೆ ಎಂಜಲು ಹಾಕಿ ಕೊರೊನಾ ಹರಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನನ್ನ ಬೆಂಬಲಿಗರು ಹೇಳಿದರು. ಹಾಗಾಗಿ ನಾನು ಅಂಥಹ ಮುಸ್ಲಿಮರಿಂದ ತರಕಾರಿ ಖರೀದಿ ಮಾಡಬೇಡಿ ಎಂದು ಹೇಳಿಕೆ ನೀಡಿದ್ದೇನೆ ಎಂದಿದ್ದಾರೆ.
ವಿರೋಧ ಪಕ್ಷಗಳು ಕೋಮುದ್ವೇಷ ಹರಡುತ್ತಿರುವ ಸುರೇಶ್ ತಿವಾರಿಯನ್ನು ಕೂಡಲೇ ಬಂಧನ ಮಾಡಬೇಕೆಂದು ಒತ್ತಾಯಿಸುತ್ತಿರುವ ನಡುವೆ ತನ್ನ ಪಕ್ಷ ಶಾಸಕರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿಯು ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.