ಚಿಕ್ಕಬಳ್ಳಾಪುರ, ಎ.29 (Daijiworld News/MB) : ಕೊರೊನಾದಿಂದ ಗುಣಮುಖರಾದವರು ಈಗಾಗಲೇ ರಕ್ತದಾನ ಮಾಡಿದ್ದಾರೆ. ಪ್ಲಾಸ್ಮಾ ಕೂಡಾ ತಯಾರಿದೆ. ಆದರೆ ಪ್ಲಾಸ್ಮಾ ಪ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದ್ದು ಆ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಪ್ಲಾಸ್ಮಾ ಥೆರಪಿ ಮಾಡಲು ಮುಂದಾಗಿದೆ.
ಈ ಕುರಿತಾಗಿ ಚಿಕ್ಕಬಳ್ಳಾಪುರ ನಗರದಲ್ಲಿ ಮೊಬೈಲ್ ಸ್ವಾಬ್ ಕಲೆಕ್ಷನ್ ಯೂನಿಟ್ ಉದ್ಘಾಟಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣದಲ್ಲಿದೆ. ಒಟ್ಟು 523 ಪ್ರಕರಣಗಳಲ್ಲಿ 198 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 325 ಮಂದಿಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಉಳಿದವರಲ್ಲಿ ಶೇ.90 ರಷ್ಟು ಕೊರೊನಾ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಯಾವುದೇ ತೊಂದರೆ ಇಲ್ಲ. ಇನ್ನು ಮುಂದೆ ಹಲವರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದರೂ ಕೂಡಾ ಪ್ಲಾಸ್ಮಾ ಥೆರೆಪಿ ಮಾಡಲು ನಮ್ಮ ರಾಜ್ಯದಲ್ಲಿ ರೋಗಿಗಳೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಬಹು ಪರಿಣಾಮಕಾರಿ ಎಂದು ತಿಳಿದ ತಕ್ಷಣ ಪ್ಲಾಸ್ಮಾ ಥೆರಪಿ ವೈದ್ಯಕೀಯ ಪ್ರಯೋಗಕ್ಕೆ ಐಸಿಎಂಆರ್ ಬಳಿ ಕರ್ನಾಟಕ ಅನುಮತಿ ಕೋರಿದ್ದು ಅನುಮತಿ ದೊರೆತಿದೆ. ಗುಣಮುಖರಾದವರಿಂದ ಪ್ಲಾಸ್ಮಾವೂ ದೊರೆತಿದೆ. ಆದರೆ ಪ್ಲಾಸ್ಮಾ ಟ್ರಾನ್ಸ್ ಪ್ಲಾಂಟ್ ಮಾಡುವಂತಹ ರೋಗಿಗಳೇ ನಮ್ಮ ರಾಜ್ಯದಲ್ಲಿಲ್ಲ. ರೋಗಿಗಳು ಇದ್ದಲ್ಲಿ ಪ್ಲಾಸ್ಮಾ ಥೆರಪಿ ಮಾಡಲಾಗುವುದು ಎಂದು ಹೇಳಿದರು.