ನವದೆಹಲಿ ಏ 29 (Daijiworld News/MSP): ಕೊರೊನಾ ಸಾಂಕ್ರಾಮಿಕ ರೋಗದಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರಕಾರ ಮುಂದಾಗಿದೆ. ಹೀಗಾಗಿ ವಿಮಾನಗಳನ್ನು , ಯುದ್ದನೌಕೆಗಳನ್ನು ಸನ್ನದ್ದ ಸಿತಿಯಲ್ಲಿಡುವಂತೆ ಕೇಂದ್ರ ಸರ್ಕಾರ ಏರ್ ಇಂಡಿಯಾ ಹಾಗೂ ನೌಕಾಪಡೆಗೆ ಸೂಚನೆ ನೀಡಿದೆ.

ಕೊಲ್ಲಿ ರಾಷ್ಟ್ರಗಳಲ್ಲಿರುವ ಸಾವಿರಾರು ಭಾರತೀಯರು ಸ್ವದೇಶಕ್ಕೆ ಹಿಂತಿರುಗಳು ಹಾತೊರೆಯುತ್ತಿದ್ದಾರೆ. ಇದಕ್ಕಾಗಿ ಸದ್ಯ ಪರಿಸ್ಥಿತಿ ಅವಲೋಕಿಸುತ್ತಿದ್ದು, ಕೇಂದ್ರ ಸರ್ಕಾರ ಈ ಸಂಬಂಧ ಯೋಜನೆ ರೂಪಿಸುತ್ತಿದೆ. ಇದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ರೂಪುರೇಷೆ ಹಾಕಿಕೊಟ್ಟಿದ್ದು, ಏರ್ ಲಿಫ್ಟ್ ವೇಳೆ ಮೊದಲ ಆದ್ಯತೆಯಲ್ಲಿ ಕೂಲಿಕಾರರನ್ನು ಕರೆತರಬೇಕು ಎಂದು ಸೂಚಿಸಿದ್ದಾರೆ. ಇದಕ್ಕೆ ತಕ್ಕುದಾದ ಪ್ಲಾನ್ ತಯಾರುಮಾಡುವಂತೆ ಮೋದಿ ವಿದೇಶಾಂಗ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕೂಲಿ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಿ ಬಳಿಕ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕರೆತರಬೇಕು. ಆ ಬಳಿಕ ಉದ್ಯೋಗಿಗಳು, ಕೊನೆಯಲ್ಲಿ ಮನೋರಂಜನೆಗಾಗಿ ಹೋದವರನ್ನು ಕರೆತರಬೇಕು ಎಂದು ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.
ಗುಜರಾತ್ ನ ಪೋಖರಣ್ನಲ್ಲಿ ಭಾರತವು ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಜಗತ್ತು ಭಾರತದ ಮೇಲೆ ದಿಗ್ಬಂಧನ ವಿಧಿಸಿದ್ದರಿಂದ ಆರ್ಥಿಕತೆ ಭಾರೀ ಪೆಟ್ಟು ತಿಂದಿತ್ತು. ಆಗ ಗಲ್ಫ್ ನಲ್ಲಿದ್ದ ಭಾರತೀಯರೇ ದೇಶವನ್ನು ಉಳಿಸಿದ್ದರು. ಹೀಗಾಗಿ ಕೊಲ್ಲಿ ರಾಷ್ಟ್ರದ ಭಾರತೀಯರಿಗೆ ಯೋಜನೆಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ.