ನವದೆಹಲಿ, ಎ.29 (DaijiworldNews/PY) : ಸಿಆರ್ಪಿಎಫ್ ಬೆಟಾಲಿಯನ್ ಪಡೆದ 46 ಯೋಧರಿಗೂ ಸೋಂಕು ತಟ್ಟಿದ್ದು, ಮಾರಣಾಂತಿಕ ಸೋಂಕಿಗೆ ಓರ್ವ ಯೋಧ ಮೃತಪಟ್ಟಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಮಹಾಮಾರಿ ಸೋಂಕು 46 ಯೋಧರಲ್ಲಿ ಪತ್ತೆಯಾಗಿರುವ ನಿಟ್ಟಿನಲ್ಲಿ, 1,000ಕ್ಕೂ ಅಧಿಕ ಯೋಧರನ್ನು ಕ್ವಾರಂಟೈನ್ನಲ್ಲಿರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲದಿನಗಳಿಂದ ದೆಹಲಿಯ ಮಯೂರ್ ವಿಹಾರ್ನಲ್ಲಿರುವ ಸಿಆರ್ಪಿಎಫ್ 31ನೇ ಬೆಟಾಲಿಯನ್ ಪಡೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.
ಮಂಡ್ವಾಲಿಯಲ್ಲಿರುವ ಆಸ್ಪತ್ರೆಯಲ್ಲಿ ಸೋಂಕು ದೃಢಪಟ್ಟ ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನು ಕೆಲವು ಯೋಧರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಹಾಮಾರಿ ಸೋಂಕಿಗೆ ಮೃತಪಟ್ಟಿರುವ 55 ವರ್ಷದ ಯೋಧ ಕೆಲವು ದಿನಗಳ ಹಿಂದೆ ಸಫ್ದರ್ಜುಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಯೋಧನಲ್ಲಿ ಎ.17ರಂದು ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಎ.21ರಂದು ಇವರಲ್ಲಿ ವೈರಸ್ ಇರುವುದಾಗಿ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.