ನವದೆಹಲಿ, ಎ.29 (Daijiworld News/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲ್ಲೇ ಇದ್ದು ಕೊರೊನಾ ಸೋಂಕಿತರ ಸಂಖ್ಯೆ 31,332 ಕ್ಕೆ ಏರಿಕೆಯಾಗಿದೆ. ಹಾಗೆಯೇ ಕೊರೊನಾಗೆ ಬಲಿಯಾದವರ ಸಂಖ್ಯೆಯು ಸಾವಿರದ ಗಡಿ ದಾಟಿದ್ದು 1,007 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 73 ಜನರು ಸಾವನ್ನಪ್ಪಿದ್ದು 7696 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಒಟ್ಟು 9318 ಜನರಲ್ಲಿ ಸೋಂಕು ಪತ್ತೆಯಾಗಿದ್ದು 400 ಮಂದಿ ಸಾವನ್ನಪ್ಪಿದ್ದಾರೆ. 1388 ಜನರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 523 ಸೋಂಕು ಪ್ರಕರಣಗಳು ದಾಖಲಾಗಿದ್ದು 20 ಮಂದಿ ಸಾವನ್ನಪ್ಪಿದ್ದಾರೆ. 207 ಮಂದಿ ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ 14 ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು ಆರಂಭಕ್ಕೆ ಅನುಮತಿ ನೀಡಲಾಗಿದೆ.
ಇನ್ನು ಮಹಾರಾಷ್ಟ್ರದ ನಂತರ ಕೊರೊನಾ ಹಾಟ್ಸ್ಪಾಟ್ ಆಗಿ ಪರಿಣಮಿಸಿರುವ ಗುಜರಾತ್ನಲ್ಲಿ ಸೋಂಕು ಪ್ರಕರಣಗಳು 3744 ಕ್ಕೆ ಏರಿಕೆಯಾಗಿದೆ. 181 ಮಂದಿ ಕೊರೊನಾಗೆ ಬಲಿಯಾಗಿದ್ದು 434 ಮಂದಿ ಗುಣಮುಖರಾಗಿದ್ದಾರೆ. ಇನ್ನು ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲ್ಲೇ ಇದ್ದು 3314 ಪ್ರಕರಣಗಳು ದಾಖಲಾಗಿದೆ. 54 ಮಂದಿ ಕೊರೊನಾಗೆ ಬಲಿಯಾಗಿದ್ದರೆ 1078 ಮಂದಿ ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗಿದ್ದು ಸೋಂಕಿತ ಸಂಪೂರ್ಣ ಗುಣಮುಖನಾಗಿದ್ದು ಇದೀಗ ಹಲವು ರಾಜ್ಯಗಳು ಪ್ಲಾಸ್ಮಾ ಚಿಕತ್ಸೆ ನೀಡಲು ಮುಂದಾಗಿದೆ.
ಇನ್ನು ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾತನಾಡಿ, ಕಳೆದ 7 ದಿನಗಳಲ್ಲಿ ದೇಶದಾದ್ಯಂತ 80 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ 2058 ಪ್ರಕರಣಗಳು, ರಾಜಸ್ಥಾನದಲ್ಲಿ 2364 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 2387, ಆಂಧ್ರ ಪ್ರದೇಶದಲ್ಲಿ 1259 ಪ್ರಕರಣ, ತೆಲಂಗಾಣದಲ್ಲಿ 1004 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 2053, ಕೇರಳ 485 ಪ್ರಕರಣಗಳು, ಜಮ್ಮು ಕಾಶ್ಮೀರದಲ್ಲಿ 565 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 725 ಪ್ರಕರಣಗಳು ದಾಖಲಾಗಿದೆ.