ಬೆಂಗಳೂರು, ಎ.29 (DaijiworldNews/PY) : ಎಪ್ರಿಲ್ ತಿಂಗಳ ವೇತನವನ್ನು ರಾಜ್ಯ ಸರ್ಕಾರಿ ನೌಕರರು ಯಾವುದೇ ಕಡಿತ ಇಲ್ಲದೇ ಪಡೆಯಲಿದ್ದಾರೆ ಎಂದು ಮಂಗಳವಾರ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಈ ವಿಚಾರವಾಗಿ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಾರ್ಯದರ್ಶಿಗಳಿಗೆ ಸೂಚಿಸಿದ್ದು, ಆದೇಶದಲ್ಲಿ ಎಪ್ರಿಲ್ ತಿಂಗಳ ಸಂಬಳವನ್ನು ನೀಡಲು ವ್ಯವಸ್ಥೆ ಮಾಡಬೇಕು ಎಂಬುದಾಗಿ ಸೂಚಿಸಲಾಗಿದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ತಿಳಿಸಿವೆ.
ವಿವಿಧ ಇಲಾಖೆಗಳಲ್ಲಿ ಪಿಂಚಣಿ ಹಾಗೂ ಸಂಬಳಕ್ಕಾಗಿ ನಿಗದಿ ಮಾಡಿಟ್ಟಿರುವ ಹಣವನ್ನು ಉಪಯೋಗಿಸಬೇಕು. ಅಲ್ಲದೇ, ಯಾವುದೇ ತಿಂಗಳ ಸಂಬಳದ ಹಣವನ್ನು ಖಜಾನೆಗಳಲ್ಲಿ ಬಾಕಿ ಇಟ್ಟುಕೊಳ್ಳಬಾರದು. ಮಾರ್ಚ್ ತಿಂಗಳ ಸಂಬಳ ಪಾವತಿಯನ್ನು ಆಡಳಿತ ಇಲಾಖೆ ಮಾಡದಿದ್ದರೆ, ಆ ಹಣವನ್ನು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಆರ್ಥಿಕ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಬೆಳಿಗ್ಗೆ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪೂರ್ಣ ಸಂಬಳ ಹಾಗೂ ಪಿಂಚಣಿ ಪಾವತಿ ಮಾಡುವಂತೆ ತಿಳಿಸಿದ್ದರು ಎಂದು ಮೂಲಗಳು ವಿವರಿಸಿವೆ.