ನವದೆಹಲಿ, ಎ.29 (Daijiworld News/MB) : ಯುಪಿಎ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ 'ಫೋನ್ ಬ್ಯಾಂಕಿಂಗ್' ಮೂಲಕ ಸಾಲ ಪಡೆದು ಗೊತ್ತಿದ್ದವರೇ ಮೋಸ ಮಾಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ದೇಶದ 50 ಪ್ರಮುಖ ಉದ್ದೇಶಪೂರ್ವಕವಾಗಿ ಸಾಲ ಹಿಂತಿರುಗಿಸದ ಉದ್ಯಮಿಗಳ 68 ಸಾವಿರದ 607 ಕೋಟಿ ರೂಪಾಯಿ ಸಾಲವನ್ನು ರೈಟಾಫ್ ಮಾಡಲಾಗಿದ್ದು ವಿರೋಧ ಪಕ್ಷ ಭಾರೀ ಟೀಕೆ ಮಾಡಿದೆ. ಈ ಮೊದಲು ಬ್ಯಾಂಕಿನಿಂದ ಸಾಲ ಪಡೆದು ವಾಪಾಸ್ ಮಾಡದ ಪ್ರಮುಖ 50 ಉದ್ಯಮಿಗಳು ಯಾರು ಎಂದು ಸದನದಲ್ಲಿ ಪ್ರಶ್ನೆ ಮಾಡಿದ್ದೆ, ಆದರೆ ಸಚಿವೆ ನಿರ್ಮಲಾ ಉತ್ತರ ನೀಡಿಲ್ಲ. ಆದರೆ ಈಗ ಆರ್ಬಿಐ ಬ್ಯಾಂಕಿಗೆ ಹಣ ಪಾವತಿ ಮಾಡದೆಯೇ ವಂಚನೆ ಮಾಡಿದವರು ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ಹಲವು ಬಿಜೆಪಿ ನಾಯಕರ ಸ್ನೇಹಿತರ ಹೆಸರು ಹೇಳಿದೆ. ಆ ಕಾರಣದಿಂದಲ್ಲೇ ಆವರು ಸಂಸತ್ತಿನಲ್ಲಿ ಇವರ ಹೆಸರನ್ನು ಹೇಳಿಲ್ಲ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು.
ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಮೋದಿ ಸರ್ಕಾರವು ಫೋನ್ ಬ್ಯಾಂಕಿಂಗ್ ಮೂಲಕ ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿಸದಿದ್ದ ಉದ್ಯಮೆಗಳ ಹಣ ವಾಪಾಸ್ ಪಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾಲ ಮರುಪಾತಿಸುವ ಸಾಮರ್ಥ್ಯವಿದ್ದರೂ ಕೂಡಾ ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರು ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡರು ಎಂದು ದೂರಿದ್ದಾರೆ.
2009-2010 ಮತ್ತು 2013-2014ರ ನಡುವೆ ವಾಣಿಜ್ಯ ಬ್ಯಾಂಕುಗಳು 1,45,226 ಕೋಟಿ ರೂಪಾಯಿಗಳನ್ನು ರೈಟಾಫ್ ಮಾಡಿದ್ದವು. ಎನ್ಡಿಎ ಸರ್ಕಾರವನ್ನು ಟೀಕೆ ಮಾಡುವ ಮೊದಲು ರೈಟಾಫ್ ಎಂದರೇನು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಾಹುಲ್ ಗಾಂಧಿಯವರು ಕೇಳಬೇಕಿತ್ತು ಎಂದು ಹೇಳಿದ್ದಾರೆ.
ಜನರನ್ನು ಹಾದಿತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಾಚಿಕೆ ಇಲ್ಲದವರಂತೆ ವರ್ತನೆ ಮಾಡುತ್ತಿದೆ. ಕಾಂಗ್ರೆಸ್ ತನ್ನ ಆಡಳಿತವಧಿಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಯಾಕೆ ವಿಫಲವಾಯಿತೆಂದು ರಾಹುಲ್ ಗಾಂಧಿಯವರು ಆತ್ಮವಲೋಕನ ಮಾಡಬೇಕು. ಕಾಂಗ್ರೆಸ್ ಆಡಳಿತ ಮಾಡುತ್ತಿದ್ದಾಗ ಆಗಲಿ ವಿರೋಧ ಪಕ್ಷದಲ್ಲಿ ಇರುವಾಗಲಾಗಲಿ ಭ್ರಷ್ಟಾಚಾರ ಮತ್ತು ಅವ್ಯವಹಾರಗಳನ್ನು ನಿಯಂತ್ರಿಸುವ ಯಾವುದೇ ಬದ್ಧತೆ ಅಥವಾ ಒಲವು ತೋರಲಿಲ್ಲ ಎಂದು ಟೀಕೆ ಮಾಡಿದ್ದಾರೆ.