ಮಂಗಳೂರು, ಏ 29 (Daijiworld News/MSP): ಯುಕೆ ನ್ಯಾಯಾಲಯದಲ್ಲಿ ಕಂಪನಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಯುಎಇಯಲ್ಲಿನ ಎನ್ಎಂಸಿ ಹೆಲ್ತ್ ಎನ್ನುವ ಬೃಹತ್ ಖಾಸಗಿ ಆರೋಗ್ಯ ಸಂಸ್ಥೆಯ ಸಂಸ್ಥಾಪಕ ಬಿ ಆರ್ ಶೆಟ್ಟಿ ಅವರು ಇದೀಗ ತನ್ನ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
"ಕಂಪನಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಕಾನೂನು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸ್ವದೇಶಕ್ಕೆ ಮರಳಿದ್ದಾರೆ" ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಬೆಂಗಳೂರಿನಲ್ಲಿರುವ ತನ್ನ 82 ವರ್ಷದ ಸಹೋದರ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾರಣ ಬೆಂಗಳೂರಿಗೆ ಬಂದಿದ್ದೆ. ಆದರೆ ಅವರು ನಂತರ ಮೃತಪಟ್ಟರು ಹೀಗಾಗಿ ಇಲ್ಲಿ ಉಳಿಯಬೇಕಾಯಿತು. ಲಾಕ್ ಡೌನ್ ಹಿನ್ನಲೆಯಲ್ಲಿ ವಿಮಾನಯಾನಕ್ಕೆ ಇರುವ ನಿರ್ಬಂಧ ತೆರವಾದ ಮೇಲೆ, ಯುಎಇಗೆ ಮರಳುತ್ತೇನೆ. ಯುಕೆ ಮತ್ತು ಯುಎಇ ಅಧಿಕಾರಿಗಳು ತನಿಖೆಯನ್ನು ತ್ವರಿತಗೊಳಿಸಲು ಮುಗಿಸಲು ಸಹಕರಿಸುತ್ತೇನೆ ಎಂದು ಹೇಳಿದ್ದಾರೆ.
ತನಿಖೆ ನಡೆಯುತ್ತಿರುವ ಕಾರಣ ಸಾರ್ವಜನಿಕ ಹೇಳಿಕೆ ನೀಡುವುದು ನಿರ್ಬಂಧಿಸಲಾಗಿತ್ತು. ಆದರೆ ನನ್ನ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಲಾಗದ ಕಾರಣ ನನ್ನ ಖ್ಯಾತಿಗೆ ಚ್ಯುತಿ ತರುವ ಪ್ರಯತ್ನ ನಡೆಯಿತು. ಆದರೆ ಇದೀಗ ಕಾನೂನು ಚೌಕಟ್ಟಿನಲ್ಲಿ ಆರೋಪಗಳಿಗೆ ಸ್ಪಷ್ಟನೆ ನೀಡುವುದು ಸೂಕ್ತ ಸಮಯವೆಂದು ನಾನು ಭಾವಿಸಿದ್ದೇನೆ.
ಎಂಸಿ ಹೆಲ್ತ್ ಪಿಎಲ್ಸಿ ('ಎನ್ಎಂಸಿ') ಸಂಸ್ಥೆಯ ಆಡಳಿತದಲ್ಲಿ 2017 ರಿಂದ ನಾನು ದೈನಂದಿನ ಕಾರ್ಯ ನಿರ್ವಾಹಕ ಜವಾಬ್ದಾರಿ ಹೊಂದಿಲ್ಲ. ಆ ಬಳಿಕ ಜಂಟಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಹಾಗೂ ಎನ್ಎಂಸಿಯ ಷೇರುದಾರನಾಗಿದ್ದೇನೆ. ಫೆಬ್ರವರಿ 16, 2020 ರಂದು ಎನ್ಎಂಸಿಯ ಆಡಳಿತ ಮಂಡಳಿಯ ಜವಾಬ್ದಾರಿಯಿಂದಲೂ ಹೊರಬಂದಿದ್ದೇನೆ. ಆದರೆ ಎನ್ಎಂಸಿಯಲ್ಲಿನ ವಂಚನೆ ಆರೋಪ ಸೇರಿದಂತೆ 2019 ರ ಡಿಸೆಂಬರ್ ರಿಂದ ನಡೆದ ಸರಣಿ ಘಟನಾವಳಿಗಳು ನನಗೆ ಭಾರೀ ಆಘಾತ ನೀಡಿದೆ.
ನನ್ನ ಸಲಹೆಗಾರರ ಹಾಗೂ ನನ್ನ ವೈಯಕ್ತಿಕ ತನಿಖೆಯ ಪ್ರಾಥಮಿಕ ವರದಿ ಪ್ರಕಾರ, ಎನ್ಎಂಸಿ, ಫಿನಾಬ್ಲರ್ ಪಿಎಲ್ಸಿ ('ಫಿನಾಬ್ಲರ್'), ಮತ್ತು ನನ್ನ ಕೆಲವು ಖಾಸಗಿ ಕಂಪನಿಗಳಲ್ಲಿ ನನ್ನ ವಿರುದ್ಧ ವೈಯಕ್ತಿಕವಾಗಿ "ಗಂಭೀರ ವಂಚನೆ ಮತ್ತು ತಪ್ಪುಗಳು ನಡೆದಿವೆ ಎಂದು ಕಂಡುಬರುತ್ತಿದೆ. ಇದು ಈಗಿನ ಮತ್ತು ಈ ಹಿಂದೆ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂದು ಸಣ್ಣ ಗುಂಪಿನಿಂದಲೇ ಈ ರೀತಿ ಗಂಭೀರ ವಂಚನೆ ನಡೆದಿದೆ.
ಅಲ್ಲದೆ ನನ್ನ ಅನುಮತಿ ಇಲ್ಲದೆ, ನನ್ನ ಗಮನಕ್ಕೆ ಬಾರದೆ ನನ್ನ ಬ್ಯಾಂಕ್ ಖಾತೆ, ಚೆಕ್ ಬುಕ್, ಸಾಲ ಮತ್ತಿತರ ವ್ಯವಹಾರಗಳನ್ನು ನಕಲಿ ಸಹಿ ಪೋರ್ಜರಿ ಮಾಡಿ ಈ ವಂಚನೆ ನಡೆಸಲಾಗಿದೆ. ವಂಚನೆ ನಡೆಸಲೆಂದೇ ನನ್ನ ಹೆಸರಿನಲ್ಲಿ ಕಂಪನಿಗಳನ್ನು ಸೃಷ್ಟಿಸಲಾಗಿದೆ. ಅಲ್ಲದೆ ನನಗರಿವಿಲ್ಲದೆ ನನ್ನ ಹೆಸರಿನಲ್ಲಿ ಕಂಪನಿಗಳನ್ನು ಸೃಷ್ಟಿಸಲಾಗಿದ್ದು. ನನ್ನ ವ್ಯವಹಾರದ ಸಂಸ್ಥೆ, ನಮ್ಮ ಆಡಳಿತ ತಂಡ ಹಾಗೂ ನನ್ನ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಈ ವಂಚನೆ ಮಾಡಲಾಗಿದೆ.
ನಾನು ಮತ್ತು ನನ್ನ ಕುಟುಂಬ, ಯುಎಇ ಮತ್ತು ಇತರ ಕಡೆಗಳಲ್ಲಿ ಪ್ರಾರಂಭಿಸಿದ ವ್ಯವಹಾರಗಳು ಕಳೆದ 45 ವರ್ಷಗಳ ಕಠಿಣ ಪರಿಶ್ರಮದಿಂದಾಗಿದೆ . ನೈತಿಕತೆ, ಸ್ವಾಭಿಮಾನ, ನಂಬಿಕೆಯ ಆಧಾರದ ಮೇಲೆ ವ್ಯವಹಾರಗಳನ್ನು ನಡೆಸುತ್ತಿದ್ದೇವೆ. ನಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ಬೆಳೆಸಲು ಯುಎಇ ಮತ್ತು ಯುಕೆ ದೇಶವು ನಮಗೆ ಭಾರಿ ಬೆಂಬಲದ ವಾತಾವರಣವನ್ನು ಒದಗಿಸಿದೆ. ಇದಕ್ಕೆ ಪ್ರತಿಯಾಗಿ, ನಾವು ಅಲ್ಲಿನ ನಾಗರಿಕರಿಗೆ ಮತ್ತು ನಿವಾಸಿಗಳಿಗೆ ಲಾಭ ಮತ್ತು ಸೇವೆಯನ್ನು ಒದಗಿಸುತ್ತಿದ್ದೇವೆ ಎಂದು ನಾವು ಭಾವಿಸಿದ್ದೇವೆ.
ಮುಖ್ಯವಾಗಿ ನಾನು ಅತಿಯಾಗಿ ನಂಬಿಕೆ ಇಟ್ಟಿರುವ ವ್ಯಕ್ತಿಗಳ ದುಷ್ಕೃತ್ಯ ಮತ್ತು ವಂಚನೆಯಿಂದ, ನನ್ನ ಕುಟುಂಬ ಮತ್ತು ನಾನು ಕಳೆದ 45 ವರ್ಷಗಳಲ್ಲಿ ಸಂಸ್ಥೆ ನಿರ್ಮಿಸಲು ಪಟ್ಟ ಶ್ರಮವು, ಕಳೆದ ಕೆಲವು ತಿಂಗಳುಗಳ ಅವಧಿಯಲ್ಲಿ ಕಳೆದುಹೋಗಿದೆ, ಅವರ ವಂಚನೆ ನನ್ನನ್ನು ಅತೀವ ದುಃಖಕ್ಕೆ ತಳ್ಳಿದೆ. ಇದು ನನ್ನ ಇಡೀ ಕುಟುಂಬವನ್ನು ಅಪಾಯಕಾರಿ ಆರ್ಥಿಕ ಸ್ಥಿತಿಗೆ ತಂದು ನಿಲ್ಲಿಸಿದೆ
ಇಂತಹ ಆರೋಗ್ಯಕೆ ಸಂಬಂಧಿಸಿದ ಸಂದಿಗ್ದ ಪರಿಸ್ಥಿತಿಯಲ್ಲಿ, ನಾವು ಸ್ಥಾಪಿಸಿದ ಕಂಪನಿಯಲ್ಲಿ ಸಾವಿರಾರು ಶ್ರಮಶೀಲ ಉದ್ಯೋಗಿಗಳ ಅನಿಶ್ಚಿತತೆ ಮತ್ತು ಕಷ್ಟಗಳಿಗೆ, ನಾನು ಪಶ್ಚತ್ತಾಪ ಪಡುತ್ತಿದ್ದೇನೆ. ನನ್ನ ವ್ಯಾಪಾರ ಪಾಲುದಾರರು, ಷೇರುದಾರರು ಮತ್ತು ಇತರರಿಗೆ ಎದುರಿಸುತ್ತಿರುವ ಸಂಕಷ್ಟ ಹಾಗೂ ನಷ್ಟ ತುಂಬಾ ನೋವುಂಟು ಮಾಡುತ್ತಿದೆ. ಆದರೆ ನನ್ನ ಮೇಲಿನ ಆರೋಪಗಳಿಂದ ಹೊರಬಂದು ಸತ್ಯಾಂಶ ಹೊರತರಲು ನಾನು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.