ಹಾವೇರಿ, ಎ.29 (DaijiworldNews/PY) : ಎಪ್ರಿಲ್ ತಿಂಗಳಿನಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮವೆಸಗಿದ ವಿವಿಧ ಜಿಲ್ಲೆಗಳ 146 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ, 4 ಲಕ್ಷ ರೂ ದಂಡ ವಿಧಿಸಲಾಗಿದೆ ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ವಿತರಣೆಯಲ್ಲಿ ಅಕ್ರಮವೆಸಗಿದ ಕಾರಣ ಹಾವೇರಿ ಜಿಲ್ಲೆಯಲ್ಲೂ 9 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು, ಹಾನಗಲ್ ತಾಲೂಕಿನಲ್ಲಿ ಒಂದು ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದವೂ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ದರ ಪಟ್ಟಿ ಪ್ರಕಟಿಸಬೇಕು. ತೂಕ ಹಾಗೂ ಅಳತೆಯಲ್ಲಿ ವ್ಯತ್ಯಾಸವಾಗಬಾರದು, ಗ್ರಾಹಕರಿಂದ ಸೇವಾ ತೆರಿಗೆ ತೆಗೆದುಕೊಳ್ಳಬಾರದು. ಈ ವಿಚಾರವಾಗಿ ದೂರುಗಳು ಬಂದಲ್ಲಿ ತಕ್ಷಣವೇ ಅಧಿಕಾರಿಗಳು ತಂಡ ಸಿದ್ದಪಡಿಸಿ ಪ್ರತೀ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ವರ್ಷಕ್ಕೆ ಆಗುವಷ್ಟು ಆಹಾರದ ದಾಸ್ತಾನು ಕೇಂದ್ರ ಸರ್ಕಾರದ ಬಳಿ ಇದೆ. ಅದೇ ರೀತಿಯಾಗಿ ರಾಜ್ಯದಲ್ಲೂ ಆಹಾರಕ್ಕೆ ಕೊರತೆಯಿಲ್ಲ. 8 ಲಕ್ಷ ಪಡಿತರ ಚೀಟಿದಾರರಿಗೆ ಸಂಬಂಧಪಟ್ಟ ಒಟ್ಟು 27 ಲಕ್ಷ ಜನರಿಗೆ ಪಡಿತರ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 31.5 ಲಕ್ಷ ಮಂದಿಗೆ 3 ತಿಂಗಳು ಉಚಿತವಾಗಿ ಅಡುಗೆ ಅನಿಲ ನೀಡಲು ಕ್ರಮ ಕೈಗೊಂಡಿದೆ. ಎಪ್ರಿಲ್ ತಿಂಗಳ ಹಣ ಈಗಾಗಲೇ ಎಲ್ಲ ಫಲಾನುಭವಿಗಳ ಖಾತೆಗೆ ಜಮೆ ಆಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರವು ರಾಜ್ಯದ 1 ಲಕ್ಷ ಕುಟುಂಬಗಳಿಗೆ 27 ಕೋಟಿ ರೂ ವೆಚ್ಚದಲ್ಲಿ 3 ತಿಂಗಳು ಉಚಿತವಾಗಿ ಅನಿಲ ನೀಡಲು ನಿರ್ಧರಿಸಿದೆ. ಭತ್ತ, ರಾಗಿ, ಜೋಳ ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮೆಕ್ಕೆ ಜೋಳ ಖರೀದಿ ಮಾಡಲು ಈಗಾಗಲೇ ಪ್ರಸ್ತಾಪ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದರು.