ಬೆಂಗಳೂರು, ಎ.29 (DaijiworldNews/PY) : ಇಸ್ರೋ ತಂತ್ರಜ್ಞಾನವನ್ನು ಪಡೆದು ಪ್ರಮುಖವಾಗಿ ಸಾರಿಗೆ ಇಲಾಖೆಯ ಕಾರ್ಯನಿರ್ವಹಣೆಯ ಗುಣಮಟ್ಟವನ್ನು ಮತ್ತಷ್ಟು ಪುನಶ್ಚೇತಗೊಳಿಸುವ ವಿಚಾರವಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಬೆಂಗಳೂರಿನ ಇಸ್ರೋ ಹೆಡ್ ಕ್ವಾಟರ್ಸ್ ನಲ್ಲಿ ಅಧ್ಯಕ್ಷ ಕೆ.ಶಿವನ್ ಅವರೊಂದಿಗೆ ಮಹತ್ವದ ಸಭೆ ನಡೆಸಿದರು.
ಸಾರಿಗೆ ಇಲಾಖೆಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಹೊಸ ಸ್ಪರ್ಷ ನೀಡುವ ಬಗ್ಗೆ ಹಾಗೂ ಕೆ.ಎಸ್.ಆರ್. ಟಿ. ಸಿ, ವಾಯವ್ಯ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ, ಬಿ.ಎಂ.ಟಿ.ಸಿ ಮುಂತಾದ ಸಂಸ್ಥೆಗಳ ವೆಚ್ಚಗಳನ್ನು ಕಡಿಮೆ ಮಾಡಿ ಆದಾಯ ಹೆಚ್ಚು ಮಾಡುವ ವಿಚಾರವಾಗಿಯೂ ಚರ್ಚೆ ಮಾಡಲಾಯಿತು.
ಸಾರಿಗೆ ಸಂಸ್ಥೆಗಳ ಬಸ್ಸುಗಳ ಸೇವೆ ಹಾಗೂ ಸರಕು ಸಾಗಾಣಿಕೆಯ ವಾಹನಗಳ ಕಾರ್ಯಚಟುವಟಿಕೆಗಳು ರಾಜ್ಯದಲ್ಲಿ ಗಮನಾರ್ಹವಾಗಿವೆ. ಈ ಸೇವೆಗಳ ಕಾರ್ಯಚಟುವಟಿಕೆಗಳಲ್ಲು ಹೆಚ್ಚು ಮಾಡಲು ಅನುಕೂಲವಾಗುವಂತೆ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸುವ ವಿಚಾರವಾಗಿ ಅಗತ್ಯವಾದ ವೈಜ್ಞಾನಿಕ ಸೇವಾ ಸೌಲಭ್ಯಗಳನ್ನು ಇಸ್ರೋದಿಂದ ಒದಗಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರು ಇಸ್ರೋದ ಮುಖ್ಯಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಸೋಂಕಿನಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಮಟ್ಟ ಕುಸಿದಿದ್ದು, ಇದರಿಂತ ಚೇತರಿಸಿಕೊಳ್ಳಲು ಬಾಹ್ಯಾಕಾಶ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುವ ವಿಚಾರವಾಗಿಯೂ ಸಭೆಯಲ್ಲಿ ಚರ್ಚಿಸಲಾಯಿತು.
ಈ ವಿಚಾರವಾಗಿ ಡಿಸಿಎಂ ಪ್ರಸ್ತಾಪನೆ ಮಾಡಿದ ಅಂಶಗಳ ಬಗ್ಗೆ ಇಸ್ರೋ ಮುಖ್ಯಸ್ಥರು ಸಹಮತ ವ್ಯಕ್ತಪಡಿಸಿದ್ದು, ಈ ಬಗ್ಗೆ ನೆರವು ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.