ಬೆಂಗಳೂರು, ಎ.29 (DaijiworldNews/PY) : ಕೊರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 86.25 ಕೋಟಿ ರೂ ಅನುದಾನವನ್ನು ಎಲ್ಲಾ ಜಿಲ್ಲೆಗಳಿಗೆ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ.
ಈ ಸಂಬಂಧ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿ ತಕ್ಷಣವೇ ಎಲ್ಲಾ ಜಿಲ್ಲೆಗಳಿಗೂ ಅಗತ್ಯವಿರುವ ಹಣಕಾಸು ನೆರವು ನೀಡಬೇಕು ಎಂದು ನಿರ್ದೇಶನ ನೀಡಿತ್ತು. ಹಾಗಾಗಿ ಈ ಆದೇಶದ ಅನ್ವಯ ಈ ಹಣವನ್ನು ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಬಿಡುಗಡೆ ಮಾಡಿದ್ದಾರೆ.
ಲ್ಯಾಬ್ ಸಲಕರಣೆಗಳ ಖರೀದಿಗೆ, ಆಹಾರ, ಬಟ್ಟೆಗಳಿಗೆ, ಗಂಟಲು ದ್ರವ ಸಂಗ್ರಹಣೆ, ತಾತ್ಕಾಲಿಕ ವಸತಿ ವ್ಯವಸ್ಥೆಗೆ ಈ ಹಣವನ್ನು ಜನರಿಗೆ ಖರ್ಚು ಮಾಡುವಂತೆ ಷರತ್ತು ವಿಧಿಸಲಾಗಿದೆ. ಬೇರೆ ಯಾವುದೇ ಉದ್ದೇಶಕ್ಕಾಗಿ ಈ ಅನುದಾನವನ್ನು ಉಪಯೋಗಿಸಬಾರದು, ಉಪಯೋಗಿಸಿದ ಹಣಕ್ಕೆ ಕಡ್ಡಾಯವಾಗಿ ಹಣ ಬಳಕೆ ಮಾಡಿದ ಪ್ರಮಾಣ ಪತ್ರವನ್ನು ನೀಡಬೇಕು.
ಹಣ ಉಪಯೋಗ ಮಾಡುವಲ್ಲಿ ಯಾವುದೇ ಲೋಪವಾದಲ್ಲಿ ನೇರವಾಗಿ ಜಿಲ್ಲಾಧಿಕಾರಿಯೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.