ನವದೆಹಲಿ, ಎ.30 (Daijiworld News/MB) : ಕೊರೊನಾ ಲಾಕ್ಡೌನ್ನಿಂದಾಗಿ ಆರ್ಥಿಕವಾಗಿ ಸಂಕಷ್ಟ ಉಂಟಾಗಿರುವ ಕಾರಣದಿಂದಾಗಿ ದೆಹಲಿ ಸರ್ಕಾರವು 2021ರ ಜುಲೈ 30 ರವರೆಗೂ ನೌಕರರ ತುಟ್ಟಿಭತ್ಯೆ ಹೆಚ್ಚಳದ ತಡೆಗೆ ಮುಂದಾಗಿದ್ದು ಕೇಂದ್ರದ ನಿರ್ಧಾರವನ್ನು ಅನುಸರಿಸಲು ತೀರ್ಮಾನ ಮಾಡಿದೆ.
ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟ ಉಂಟಾದ ಕಾರಣದಿಂದಾಗಿ ಈ ಮೊದಲು ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರ ತುಟ್ಟಿಭತ್ಯೆಗಳ ಹೆಚ್ಚಳಕ್ಕೆ ಕೇಂದ್ರ ಸರಕಾರ ಒಂದು ವರ್ಷದವರೆಗೆ ತಡೆಯೊಡ್ಡಿತ್ತು. ಇದೀಗ ಕೇಂದ್ರ ಸರ್ಕಾರದ ನಿರ್ಧಾರವನ್ನು ಅನುಸರಿಸಿರುವ ದೆಹಲಿ ಸರ್ಕಾರವು ಕೂಡಾ ತುಟ್ಟಿಭತ್ಯೆ ಹೆಚ್ಚಳದ ತಡೆಗೆ ತೀರ್ಮಾನಿಸಿದ್ದು ದೆಹಲಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸುಮಾರು 2.2 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಇದು ಅನ್ವಯವಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ದೆಹಲಿ ಹಣಕಾಸು ಇಲಾಖೆ, "ದೆಹಲಿ ಸರ್ಕಾರವು ತುಟ್ಟಿಭತ್ಯೆ ವಿಚಾರದಲ್ಲಿ ಕೇಂದ್ರದ ಆದೇಶವನ್ನು ಅನುಮೋದನೆ ಮಾಡಿದ್ದು ದೆಹಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೂ ಇದು ಅನ್ವಯವಾಗುತ್ತದೆ. ಇದನ್ನು ಕೊರೊನಾ ನಿಯಂತ್ರಣಕ್ಕಾಗಿ ವಿನಿಯೋಗ ಮಾಡಲಾಗುವುದು" ಎಂದು ತಿಳಿಸಿದೆ.