ನವದೆಹಲಿ, ಎ.30 (Daijiworld News/MB) : ಲಾಕ್ಡೌನ್ ಇರುವ ಕಾರಣದಿಂದಾಗಿ ವಿಶ್ವದ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡಾ ದೇಶದಲ್ಲಿ ಕೊರೊನಾ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದೆ. ಒಂದೇ ದಿನದಲ್ಲಿ ದೇಶದಾದ್ಯಂತ 1,718 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಈವರೆಗೂ 33,050 ಜನರಿಗೆ ಸೋಂಕು ದೃಢಪಟ್ಟಿದೆ. ಬುಧವಾರ ಕೊರೊನಾಗೆ 66 ಮಂದಿ ಮೃತಪಟ್ಟಿದ್ದು ಕೊರೊನಾಗೆ ಬಲಿಯಾದವರ ಸಂಖ್ಯೆ 1074 ಕ್ಕೆ ಏರಿಕೆಯಾಗಿದೆ. 8325 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿಯತ್ತ ತಲುಪಿದ್ದು 9915 ಜನರಲ್ಲಿ ಸೋಂಕು ದೃಢಪಟ್ಟಿದೆ. 432 ಜನರು ಕೊರೊನಾದಿಂದಾಗಿ ಮೃತಪಟ್ಟಿದ್ದು 1593 ಜನರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 535 ಸೋಂಕು ಪ್ರಕರಣಗಳು ದಾಖಲಾಗಿದ್ದು 21 ಮಂದಿ ಸಾವನ್ನಪ್ಪಿದ್ದಾರೆ. 207 ಮಂದಿ ಗುಣಮುಖರಾಗಿದ್ದಾರೆ.
ಇನ್ನು ಮಹಾರಾಷ್ಟ್ರದ ನಂತರ ಕೊರೊನಾ ಹಾಟ್ಸ್ಪಾಟ್ ಆಗಿ ಪರಿಣಮಿಸಿರುವ ಗುಜರಾತ್ನಲ್ಲಿ ಸೋಂಕು ಪ್ರಕರಣಗಳು 4082 ಕ್ಕೆ ಏರಿಕೆಯಾಗಿದೆ. 197 ಮಂದಿ ಕೊರೊನಾಗೆ ಬಲಿಯಾಗಿದ್ದು 527 ಮಂದಿ ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ 3439 ಪ್ರಕರಣಗಳು ದಾಖಲಾಗಿದೆ. 56 ಮಂದಿ ಕೊರೊನಾಗೆ ಬಲಿಯಾಗಿದ್ದರೆ 1092 ಮಂದಿ ಗುಣಮುಖರಾಗಿದ್ದಾರೆ. .
ತಮಿಳುನಾಡಿನಲ್ಲಿ 2162 ಪ್ರಕರಣಗಳು, ರಾಜಸ್ಥಾನದಲ್ಲಿ 2438 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 2561, ಆಂಧ್ರ ಪ್ರದೇಶದಲ್ಲಿ 1332 ಪ್ರಕರಣ, ತೆಲಂಗಾಣದಲ್ಲಿ 1012 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 2134, ಕೇರಳ 495 ಪ್ರಕರಣಗಳು, ಜಮ್ಮು ಕಾಶ್ಮೀರದಲ್ಲಿ 581 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 758 ಪ್ರಕರಣಗಳು ದಾಖಲಾಗಿದೆ.