ನವದೆಹಲಿ, ಏ 30 (Daijiworld News/MSP): ಇನ್ನೇನು ಭಾರತದಲ್ಲಿ ಎರಡನೇ ಹಂತದ ಕೋವಿಡ್ ಲಾಕ್ಡೌನ್ ಕೊನೆಗೊಳ್ಳಲು ನಾಲ್ಕೇ ದಿನ ಬಾಕಿ ಉಳಿದಿದೆ. ಹಾಗಿದ್ದರೆ ಕೇಂದ್ರ ಸರ್ಕಾರದ ಇರುವ ಮುಂದಿನ ನಡೆ ಏನು? ಲಾಕ್ ಡೌನ್ ಮುಂದುವರಿಯಲಿದೆಯೇ, ಅಥವಾ ಇಲ್ಲವೇ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಇನ್ನೊಂದೆಡೆ ಲಾಕ್ ಡೌನ್ ಮುಂದುವರಿಕೆ ಹಾಗೂ ಸಡಿಲಿಕೆ ಬಗ್ಗೆಯೂ ತಜ್ಞರ ವಲಯದಲ್ಲಿ ಚರ್ಚೆಗಳು ಪ್ರಾರಂಭವಾಗಿವೆ.
ಮೇ 3ರ ಅಂದರೆ ಲಾಕ್ಡೌನ್ ಮುಕ್ತಾಯವಾದ ಬಳಿಕ ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಮಾತ್ರ ಈಗ ಇರುವ ಎಲ್ಲ ನಿರ್ಬಂಧಗಳೂ ಮುಂದುವರಿಯಲಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇದರೊಂದಿಗೆ ವೈರಸ್ ನ್ನು ಸೂಕ್ತ ರೀತಿಯಲ್ಲಿ ನಿಯಂತ್ರಣ ಮಾಡಲು ಹಾಗೂ ಲಾಕ್ಡೌನ್ನಿಂದ ಹೊರಬರಲು ಹಾಂಗ್ಕಾಂಗ್ ಮಾದರಿ ಅನುಸರಣೆ ಮಾಡಿದರೆ ಸೂಕ್ತ ಎಂಬ ಮಾತುಗಳೂ ಕೇಳಿಬರುತ್ತಿವೆ.
ಭಾರತ ಮತ್ತು ಹಾಂಗ್ ಕಾಂಗ್ ನಲ್ಲಿ ಒಂದೇ ಸಮಯದಲ್ಲಿ ಕೊರೊನಾ ಪತ್ತೆಯಾದರೂ ಅಲ್ಲಿರುವ ಸೋಂಕಿತರ ಸಂಖ್ಯೆ ಕೇವಲ ೧೦೩೮. ಆದರೆ ಭಾರತದಲ್ಲಿ ೩೦ ಸಾವಿರಕ್ಕೂ ಹೆಚ್ಚು.
ಹಾಂಗ್ ಕಾಂಗ್ ನಲ್ಲಿ ಲಾಕ್ಡೌನ್ ಜಾರಿಗೊಳಿಸದೆ, ಸೋಂಕಿತರ ಪರಿಣಾಮಕಾರಿ ಪತ್ತೆ, ಸೋಂಕಿತರ ಸಂಪರ್ಕಕ್ಕೆ ಒಳಗಾದವರ ಕಟ್ಟುನಿಟ್ಟಿನ ಕ್ವಾರೆಂಟೈನ್ ಮತ್ತು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ನಿಯಮದ ಶಿಸ್ತಿನ ಪಾಲನೆ; ರೀತಿಯ ಮೂರು ಅಂಶಗಳ ಶಿಸ್ತುಬದ್ದ ಪಾಲನೆಯಿಂದ ಕೊರೊನಾ ನಿಯಂತ್ರಣ ಸಾಧ್ಯವಾಯಿತು. ಆದರೆ ಭಾರತದಲ್ಲಿ ಈ ನಿಯಮ ಜಾರಿಯಲ್ಲಿದ್ದರೂ ಭಾರತೀಯರು ಅದನ್ನು ಎಷ್ಟು ಪರಿಣಾಮಕಾರಿಯಾಗಿ ಪಾಲಿಸುತ್ತರೇ? ಎನ್ನುವುದೇ ಪ್ರಶ್ನೆಯಾಗಿದೆ.
ಕೊರೊನಾ ನಿಯಂತ್ರಣಕ್ಕಾಗಿ , ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ , ಎಂಬ ಸರ್ಕಾರ ಒಂದು ಕರೆಗೆ ಹಾಂಕ್ ಕಾಂಗ್ ಜನ ಪ್ರಬುದ್ದತೆ ಮೆರೆದಿದ್ದು, ಅಲ್ಲಿನ ಶೇ. 99 ಜನ ಮಾಸ್ಕ್ ಧರಿಸಿ ಓಡಾಡುತ್ತಿದ್ದರು. ಮಾತ್ರವಲ್ಲದೆ ಶೇ. 88 ಮಂದಿ ಸಾಮಾಜಿಕ ಅಂತರದ ನಿಯಮ ಪಾಲಿಸಿದ್ದರು.
ಆದರೆ ಭಾರತದಂತಹ ಜನಸಂಖ್ಯೆ ಹೆಚ್ಚಾಗಿರುವ ದೇಶದಲ್ಲಿ ಇದು ಸಾಧ್ಯವೇ? ಹಾಗಿದ್ದರೆ ಲಾಕ್ ಡೌನ್ ಮುಗಿದ ಬಳಿಕ ಸರ್ಕಾರದ ಮುಂದಿರುವ ಯೋಜನೆ ಏನು ? ಎಲ್ಲವೂ ಇನ್ನೆರಡು ದಿನಗಳಲ್ಲಿ ತಿಳಿಯಲಿದೆ.