ನವದೆಹಲಿ, ಎ.30 (DaijiworldNews/PY) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಹೇರಿರುವ ಕೇಂದ್ರ ಸರ್ಕಾರ ಇದೀಗ ಲಾಕ್ಡೌನ್ ಮೇಲೆ ಹೇರಿರುವ ನಿರ್ಬಂಧಕ್ಕೆ ಮತ್ತೊಂದು ವಿನಾಯಿತಿ ನೀಡಿದ್ದು, ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ಪ್ರವಾಸಿಗರು ತಮ್ಮ ಮನೆಗಳಿಗೆ ಮರಳಲು ಅನುಮತಿ ನೀಡಿದೆ.
ಗೃಹ ಸಚಿವಾಲಯವು ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ಸಂಚಾರಕ್ಕೆ ಅನುಮತಿ ನೀಡಿದ್ದು, ಈ ವಿಚಾರವಾಗಿ ಗುರುವಾರ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಲಾಕ್ಡೌನ್ನಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತಲುಪಲು ವಿಶೇಷ ಸಾರಿಗೆ ವ್ಯವಸ್ಥೆ ಮಾಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.
ಕೇಂದ್ರಾಡಳಿತ ಪ್ರದೇಶ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ತೆರಳಲು ಇಚ್ಚಿಸುವ ನಿರ್ದಷ್ಟವಾದ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಗುಂಪನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪರಸ್ಪರ ಸಹಕಾರದೊಂದಿಗೆ ಅವರನ್ನು ಯಾವುದೇ ತೊಂದರೆಗೆ ಒಳಗಾಗದಂತೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಬೇಕು. ಅಲ್ಲದೇ, ವಿಶೇಷ ಬಸ್ ವ್ಯವಸ್ಥೆ ಮಾಡುವ ಮೂಲಕ ಸಂಕಷ್ಟಕ್ಕೊಳಗಾಗಿರುವ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡಲು ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆಯೂ ಗೃಹ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆ ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಹಾಗೂ ಪ್ರವಾಸಿಗರು ನಿರಾಶ್ರಿತರಾಗಿದ್ದು, ಇದೀಗ ಕೇಂದ್ರ ಸರ್ಕಾರದ ಈ ನಡೆಯಿಂದ ಜನರಿಗೆ ನೆಮ್ಮದಿ ದೊರೆತಂತಾಗಿದೆ.