ನವದೆಹಲಿ, ಎ.30 (Daijiworld News/MB) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡಲಾಗಿದ್ದು ಇದರಿಂದಾಗಿ ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಆಗಬಹುದಾದ ಸಮಸ್ಯೆಗಳ ಕುರಿತಾಗಿ ಆರ್ಬಿಐ ಮಾಜಿ ಮುಖ್ಯಸ್ಥ ರಘುರಾಮ್ ರಾಜನ್ ಅವರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ವಿಡಿಯೋ ಕರೆ ಮೂಲಕ ಚರ್ಚೆ ನಡೆಸಿದ್ದು ದೀರ್ಘಕಾಲದ ಲಾಕ್ಡೌನ್ನಿಂದಾಗಿ ಭಾತರದ ಆರ್ಥಿಕತೆಗೆ ಸಂಕಷ್ಟವಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಭಾರತದಲ್ಲಿ ಬಡವರ ಪ್ರಾಣ ಉಳಿಸುವ ಕುರಿತಾಗಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಘುರಾಮ್ ರಾಜನ್ ಅವರು, ದೇಶದಲ್ಲಿ ಬಡವರ ಪ್ರಾಣ ಕಾಪಾಡಲು ನಮಗೆ ₹65,000 ಕೋಟಿ ಹಣದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಬಹಳ ಕಾಲದವರೆಗೆ ಮುಂದುವರೆಸುವುದು ಬಹಳ ಸರಳದಂತೆ ಕಾಣಬಹುದು. ಆದರೆ ಇದರಿಂದಾಗಿ ಆರ್ಥಿಕತೆ ಸ್ಥಿರವಾಗಿರಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ನಾವು ಜಾಣತನದಿಂದ ಲಾಕ್ಡೌನ್ನ್ನು ತೆರವು ಮಾಡಬೇಕು. ಅದಕ್ಕಾಗಿ ಕೊರೊನಾ ಸೋಂಕಿತರನ್ನು ಪ್ರತ್ಯೇಕವಾಗಿಡಲೇ ಬೇಕು ಎಂದಿದ್ದಾರೆ.