ಬೆಂಗಳೂರು, ಎ.30 (DaijiworldNews/PY) : ಎಣ್ಣೆ ನಮ್ಮದಲ್ಲ, ಊಟ ಮಾತ್ರ ನಮ್ಮದು. ಎಣ್ಣೆ ನಿಮ್ಮದು, ಊಟ ನಮ್ಮದು. ಸದ್ಯಕ್ಕೆ ಎಣ್ಣೆ ಬೇಡವೇ ಬೇಡ. ಎಣ್ಣೆ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಷ್ಟೇ ಆಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಮದ್ಯದ ಅಂಗಡಿ ತೆರಯಲು ಅನುಮತಿ ದೊರಕುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕಂತು ಎಣ್ಣೆ ಬೇಡವೇ ಬೇಡ. ಎಣ್ಣೆ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಷ್ಟೆ ಆಗುವುದು. ಈಗ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದರೆ ಕೊಟ್ಟಿರುವ ರೇಷನ್ ಎಲ್ಲಾ ಹೋಗುತ್ತದೆ. ಈ ನಿಟ್ಟಿನಲ್ಲಿ ಸದ್ಯ ಎಣ್ಣೆ ವಿಷಯ ಬೇಡ ಎಂದರು.
ಬೆಂಗಳೂರಿನಲ್ಲಿ ಮಳೆ ಬಂದ ಪರಿಣಾಮ ಕಳೆದ ಎರಡು ದಿನಗಳಿಂದ ಅನಾಹುತಗಳು ಸಂಭವಿಸಿವೆ. ಅಲ್ಲದೇ, ಮಳೆಯೂ ಬೇಗ ಆರಂಭವಾಗಿದೆ. ಈ ಬಾರಿ ಅಧಿಕ ಮಳೆಯಾಗುತ್ತದೆ ಎಂದು ಸಮೀಕ್ಷೆಗಳು ನಡೆದಿದೆ ಎಂದು ತಿಳಿಸಿದರು.
ಮಳೆ ಬಂದು ರಸ್ತೆ ಹಾಳಾಗಿದ್ದು, ಗೋಡೆ ಕುಸಿದಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಹೇಗೆ ನಿಯಂತ್ರಿಸುವುದು ಎಂಬ ವಿಚಾರದ ಬಗ್ಗೆ ಇಂದು ಸಂಜೆ ಬಿಬಿಎಂಪಿ ಸಭೆ ಕರೆದಿದ್ದೇವೆ. ನಮಗೆ ಕೊರೊನಾ ನಿಯಂತ್ರಿಸುವ ಸವಾಲು ಒಂದು ಕಡೆಯಾದರೆ, ಇನ್ನೊಂದು ಕಡೆ ಮಳೆಯ ಸಮಸ್ಯೆಯಾಗಿದೆ ಎಂದು ಹೇಳಿದರು.