ಲಕ್ನೋ, ಎ.30 (DaijiworldNews/PY) : ಆಂಬುಲೆನ್ಸ್ನಲ್ಲಿ ತಂದೆಯನ್ನು ರೋಗಿಯಂತೆ ಮಲಗಿಸಿ ದೆಹಲಿಗೆ ಉತ್ತರಪ್ರದೇಶದಿಂದ ಪ್ರಯಾಣಿಸಿ ಅಲ್ಲಿ ವಿವಾಹವಾಗಿ ಬಂದಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.
ಅಹ್ಮದ್ (26) ತನ್ನ ತಂದೆಗೆ ಅನಾರೋಗ್ಯ ಎಂದು ಹೇಳಿ ಬಾಡಿಗೆ ಆಂಬುಲೆನ್ಸ್ ಪಡೆದುಕೊಂಡಿದ್ದು, ಬಳಿಕ ತಂದೆಯನ್ನು ಆಂಬುಲೆನ್ಸ್ನಲ್ಲಿ ಮಲಗಿಸಿ ಅವರಿಗೆ ಡ್ರಿಪ್ಸ್ ಹಾಕಿ ದೆಹಲಿಗೆ ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸಿದ್ದಾನೆ. ಪ್ರಯಾಣದ ನಡುವೆ ಚೆಕ್ಪೋಸ್ಟ್ನಲ್ಲಿ ಅಡ್ಡಗಟ್ಟಿದ ಪೊಲೀಸರಿಗೆ ತಂದೆಗೆ ಅನಾರೋಗ್ಯ ಎಂದು ಹೇಳಿ ವಂಚಿಸಿದ್ದಾನೆ. ಬಳಿಕ ದೆಹಲಿಗೆ ತೆರಳಿ ಅಲ್ಲಿ ವಿವಾಹವಾಗಿ ಪತ್ನಿಯೊಡನೆ ಮಂಗಳವಾರ ತನ್ನ ಮನೆಗೆ ವಾಪಾಸ್ಸಾಗಿದ್ದಾನೆ.
ಅಹ್ಮದ್ ದೆಹಲಿಯ ಹುಡುಗಿಯನ್ನು ವಿವಾಹವಾಗಿ ಬಂದಿರುವ ವಿಷಯ ನೆರೆಹೊರೆಯವರಿಗೆ ಗೊತ್ತಾಗಿದೆ. ಆ ವೇಳೆ ಅವರು ವಾಸವಿದ್ದ ಖತೌಲಿ ಪ್ರದೇಶದಲ್ಲಿ ಐದು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿತ್ತು. ದೆಹಲಿಯಿಂದ ವಾಪಾಸ್ಸಾಗಿರುವ ಇವರನ್ನು ಕಂಡು ಆತಂಕಗೊಂಡ ಅಕ್ಕಪಕ್ಕದವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಮಾಹಿತಿ ಪಡೆದುಕೊಂಡ ಬಳಿಕ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆಯ ಅಧಿಕಾರಿಗಳುಇಸ್ಲಾಂ ನಗರ ಪ್ರದೇಶದ ಖತೌಲಿಯಲ್ಲಿರುವ ಅಹ್ಮದ್ ಮನೆಗೆ ಬಂದಿದ್ದಾರೆ. ಬಳಿಕ ಅಧಿಕಾರಿಗಳು ವಧು ಹಾಗೂ ವರ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರಿಂದ ಕೊರೊನಾ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಿದ್ದು, ಅವರನ್ನು ಕ್ವಾರಂಟೈನಲ್ಲಿರಿಸಿದ್ದಾರೆ.
ಈ ಪ್ಲಾನ್ ಮಾಡುವ ಮೊದಲು ಅಹ್ಮದ್ ಇನ್ನೊಂದು ಪ್ಲಾನ್ ಮಾಡಿದ್ದು, ಅಪ್ಪನೊಂದಿಗೆ ಸೇರಿಕೊಂಡು ಮುಜಾಫರ್ ನಗರದಿಂದ ಗಂಗಾ ಕಾಲುವೆಯ ಮೇಲೆ ದೆಹಲಿಗರ ಹೋಗಲು ಉಪಾಯ ಮಾಡಿದ್ದರು. ಅಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅವರನ್ನು ತಡೆದು ಮನೆಗೆ ಕಳುಹಿಸಿದ್ದ ಕಾರಣ ಅಹ್ಮದ್ ಆಂಬುಲೆನ್ಸ್ನಲ್ಲಿ ದೆಹಲಿಗೆ ಹೋಗುವ ಉಪಾಯ ಮಾಡಿ ಪೊಲೀಸರ ವಶವಾಗಿದ್ದಾನೆ.
ದೆಹಲಿಗೆ ಆಂಬುಲೆನ್ಸ್ನಲ್ಲಿ ಹೋಗಿದ್ದ ಅವರು ನಿಖಾ ಸಮಾರಂಭದಲ್ಲಿ ಮದುವೆಯಾಗಿದ್ದು, ಬಳಿಕ ವಧುವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಸಂಬಂಧ ಆಂಬುಲೆನ್ಸ್ ಚಾಲಕ ಮೆಹ್ತಾಬ್ ಮೇಲೂ ದೂರು ದಾಖಲಾಗಿದೆ.