ಬೆಳಗಾವಿ, ಎ.30 (Daijiworld News/MB) : ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಲ್ಲೇ ಇದ್ದು ಒಂದೇ ದಿನ 14 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 69 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಗುರುವಾರ ಹೊಸದಾಗಿ 22 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಬೆಳಗಾವಿಯ 14 ಪ್ರಕರಣಗಳು ಸೇರಿದಂತೆ ವಿಜಯಪುರದಲ್ಲಿ 2, ಬೆಂಗಳೂರು ನಗರದಲ್ಲಿ 3, ದಕ್ಷಿಣ ಕನ್ನಡದಲ್ಲಿ 1, ತುಮಕೂರಿನಲ್ಲಿ 1 ಮತ್ತು ದಾವಣಗೆರೆಯಲ್ಲಿ 1 ಪ್ರಕರಣ ವರದಿಯಾಗಿದೆ.
ಇನ್ನು ಬೆಳಗಾವಿಯಲ್ಲಿ ದೃಢಪಟ್ಟ 14 ಹೊಸ ಕೊರೊನಾ ಪ್ರಕರಣಗಳ ಪೈಕಿ ಹಿರೇಬಾಗೇವಾಡಿಯಲ್ಲಿಯೇ 11 ಪ್ರಕರಣಗಳು ದೃಢಪಟ್ಟಿದೆ. ಇನ್ನುಳಿದಂತೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ 3 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. ಜಿಲ್ಲೆಯ 69 ಪ್ರಕರಣಗಳ ಪೈಕಿ ಹಿರೇಬಾಗೇವಾಡಿಯಲ್ಲಿಯೇ 36 ಪ್ರಕರಣಗಳು ದೃಢಪಟ್ಟಿದೆ.
ಸಂಕೇಶ್ವರದ 9 ವರ್ಷದ ಬಾಲಕ, 8 ವರ್ಷದ ಬಾಲಕಿ, 75 ವರ್ಷದ ವೃದ್ಧೆಗೆ, ಹಿರೇಬಾಗೇವಾಡಿಯ 24 ವರ್ಷದ ಮಹಿಳೆ, 27 ವರ್ಷದ ಪುರುಷ, 24 ವರ್ಷದ ಮಹಿಳೆ, 18 ವರ್ಷದ ಯುವಕ, 48 ವರ್ಷದ ಮಹಿಳೆ, 50 ವರ್ಷದ ಪುರುಷ, 27 ವರ್ಷದ ಮಹಿಳೆ, 43 ವರ್ಷದ ಪುರುಷ, 16 ವರ್ಷದ ಬಾಲಕ, 36 ವರ್ಷದ ಮಹಿಳೆ, 36 ವರ್ಷದ ಪುರುಷನಿಗೆ ಸೋಂಕು ತಗುಲಿದೆ.