ಬೆಂಗಳೂರು, ಎ.30 (DaijiworldNews/PY) : ಸ್ಪೋಟಕ ಮಾದರಿಯ ಅನುಮಾನಾಸ್ಪದ ವಸ್ತುವೊಂದು ನಗರದ ಕತ್ರಿಗುಪ್ಪೆ ಬಳಿ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಹನುಮಂತ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಧಾವಿಸಿದೆ. ಪೊಲೀಸರು ವಸ್ತುವನ್ನು ತಕ್ಷಣ ಸೀಲ್ ಮಾಡಿದ್ದು, ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.
ಪತ್ತೆಯಾಗಿರುವ ಸ್ಪೋಟಕ ವಸ್ತುವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಭಯಪಡುವ ಅವಶ್ಯಕತೆಯಿಲ್ಲ ಎಂದು ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು. ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಮಾತನಾಡಿ, ಪತ್ತೆಯಾದ ಸ್ಪೋಟಕವು ಮೇಲ್ನೋಟಕ್ಕೆ ಪಟಾಕಿ ಎಂದು ಕಂಡುಬಂದಿದೆ. ಕೂಡಲೇ ಬಾಂಬ್ ಸ್ಕ್ವಾಡ್ ಹಾಗೂ ಎಫ್ಎಸ್ಎಲ್ ಕರೆಸಿ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದರು.
ಮಡಿವಾಳದ ಎಫ್ಎಸ್ಎಲ್ಗೆ ಅನುಮಾಸ್ಪದ ವಸ್ತುವನ್ನು ಕಳುಹಿಸಿದ್ದೇವೆ. ಮನೆಯಲ್ಲಿದ್ದ ಪಟಾಕಿಯ ಮಾದರಿಯಂತಹ ವಸ್ತುವನ್ನು ಬಿಸಾಡಿರಬೇಕು. ಮಳೆ ಬಂದ ಕಾರಣ ಕೊಳಚೆ ನೀರಿನ ಮೂಲಕ ಹರಿದು ಬಂದಿರುವ ಸಾಧ್ಯತೆಯಿದೆ. ಭಯಪಡಬೇಕಾಗಿಲ್ಲ. ಎಫ್ಎಸ್ಎಲ್ ವರದಿ ನಂತರ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ ಎಂದರು.