ಚಂಡಿಗಢ್, ಎ.30 (DaijiworldNews/PY) : ಪಂಜಾಬ್ನ ಪಟಿಯಾಲದಲ್ಲಿ ಕರ್ತವ್ಯ ನಿರತ ಎಎಸ್ಐ ಹರ್ಜಿತ್ ಸಿಂಗ್ ಅವರ ಎಡಗೈನ್ನು ಜನರ ಗುಂಪೊಂದು ತುಂಡರಿಸಿದ್ದ ಘಟನೆ ನಡೆದಿದ್ದು, ಸತತ ಏಳು ತಾಸುಗಳ ಶಸ್ತ್ರ ಚಿಕಿತ್ಸೆ ನಡೆಸಿ ಮರುಜೋಡಣೆ ಮಾಡಲಾಯಿತು. ಇದೀಗ ಸತತ 18 ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಹರ್ಜಿತ್ ಸಿಂಗ್ ಗುರುವಾರ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್ ಆಗಿದ್ದು, ಪಟಿಯಾಲಾದಲ್ಲಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೆಂಪುಹಾಸಿನ ಮೇಲೆ ಬರಮಾಡಿಕೊಂಡು ಅವರಿಗೆ ವಿಶೇಷವಾದ ಸ್ವಾಗತ ನೀಡಿದ್ದಾರೆ.

ಈ ನಡುವೆ ಇನ್ನೊಂದು ವಿಶೇಷವೆಂದರೆ, ಎಎಸ್ಐ ಹರ್ಜಿತ್ ಸಿಂಗ್ ಅವರ ಪುತ್ರ ಅರ್ಷ್ಪ್ರೀತ್ ಸಿಂಗ್ಗೆ ಕಾನ್ಸ್ಟೆಬಲ್ ಹುದ್ದೆ ನೀಡಲಾಗಿದ್ದು, ಹರ್ಜಿತ್ ಸಿಂಗ್ ಅವರಿಗೆ ಡಿಜಿಪಿ ದಿನಕರ್ ಗುಪ್ತಾ ಖುದ್ದಾಗಿ ನೇಮಕಾತಿ ಪತ್ರವನ್ನು ಆಸ್ಪತ್ರೆಯಲ್ಲೇ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಂಜಾಬ್ನಲ್ಲಿ ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕರ್ಫ್ಯೂ ವಿಧಿಸಲಾಗಿದ್ದು, ಇದರೊಂದಿಗೆ ಈ ಅವಧಿಯನ್ನು ಮೇ.16ರವರೆಗೂ ವಿಸ್ತರಿಸಲಾಗಿದೆ. ಅಲ್ಲಿ ಮನೆಯಿಂದ ಹೊರಗೆ ಬರಲು ಕಡ್ಡಾಯವಾಗಿ ಪಾಸ್ ಪಡೆಯಲೇ ಬೇಕಿತ್ತು. ಅಲ್ಲದೇ, ಇದನ್ನು ಪೊಲೀಸರು ಕೂಡಾ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರು.
ಎಪ್ರಿಲ್ 12 ರ ಬೆಳಗ್ಗೆ ಕರ್ತವ್ಯ ನಿರತ ಎಎಸ್ಐ ಹರ್ಜಿತ್ ಸಿಂಗ್ ಅವರು ಪಟಿಯಾಲಾದ ತರಕಾರಿ ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಬಂದಿದ್ದ ನಿಹಾಂಗ್ಗಳಿಗೆ ಪಾಸ್ ಎಲ್ಲಿ ಎಂದು ಕೇಳಿದ್ದರು. ಇದರಿಂದ ಕೋಪಗೊಂಡ ಗುಂಪೊಂದು ಅವರ ಎಡಗೈಯನ್ನು ಕತ್ತರಿಸಿತ್ತು. ನಂತರ ಗುರುದ್ವಾರದಲ್ಲಿ ಅಡಗಿರುವವರನ್ನು ಪೊಲೀಸ್ ಬಂದೋಬಸ್ತ್ ಮಾಡಿ ಬಂಧಿಸಲಾಗಿತ್ತು.
ಎಎಸ್ಐ ಹರ್ಜಿತ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢ್ನ ಸ್ನಾನಕೋತ್ತರ ವೈದ್ಯಕೀಯ ಸಂಸ್ಥೆಗೆ ಸೇರಿಸಲಾಗಿತ್ತು. ಏಳು ತಾಸುಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ ತುಂಡಾಗಿದ್ದ ಕೈಯನ್ನು ಮರುಜೋಡಿಸುವಲ್ಲಿ ಪೊಲೀಸರು ಸಫಲರಾಗಿದ್ದರು. ಎಎಸ್ಐ ಅವರ ಕರ್ತವ್ಯವನ್ನು ನಿಷ್ಠೆಯನ್ನು ಶ್ಲಾಘಿಸಿ ಇಲಾಖೆ ಹರ್ಜಿತ್ ಸಿಂಗ್ ಅವರನ್ನು ಎಸ್ಐ ಹುದ್ದೆಗೆ ಭಡ್ತಿ ಮಾಡಿತ್ತು.
ಗುರುವಾರ ಡಿಸ್ಚಾರ್ಜ್ ಆಗಿ ವಾಪಾಸ್ಸಾದ ಹರ್ಜಿತ್ ಸಿಂಗ್ ಅವರಿಗೆ ವಿಶೇಷ ಸ್ವಾಗತ ನೀಡುವುದರೊಂದಿಗೆ ಹರ್ಜಿತ್ ಸಿಂಗ್ ಅವರ ನೇಮ್ಪ್ಲೇಟ್ ಅನ್ನು ತಮ್ಮ ಎದೆಯ ಮೇಲೆ ಧರಿಸುವ ಮೂಲಕ ಪಂಜಾಬ್ ಪೊಲೀಸರು ಗೌರವ ಸಲ್ಲಿಸಿದರು.