ನವದೆಹಲಿ, ಎ.30 (DaijiworldNews/PY) : ಕೊರೊನಾ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಲು ಯಾವುದೇ ನಿರ್ದೇಶನಯನ್ನು ನೀಡುವುದಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ಕೊರೊನಾ ರೋಗಿಗಳಿಗೆ ಪ್ತಸ್ತುತ ಹೈಡ್ರಾಕ್ಸಿಕ್ಲೊರೊಕ್ವಿನ್ ಹಾಗೂ ರೋಗನಿರೋಧಕ ಅಜಿಟ್ರೊಮೈಸಿನ್ ಅನ್ನು ಕೊಡಲಾಗುತ್ತಿತ್ತು. ಈ ಔಷಧಗಳಿಂದ ಅಡ್ಡ ಪರಿಣಾಮ ಉಂಟಾಗುತ್ತಿದ್ದು, ಹಾಗಾಗಿ ಜನರು ಸಾಯುತ್ತಿದ್ದಾರೆ ಎಂದು ಎನ್ಜಿಒ ಪೀಪಲ್ ಫಾರ್ ಬೆಟರ್ ಟ್ರೀಟ್ಮೆಂಟ್ ಅರ್ಜಿ ನೀಡಿತ್ತು.
ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್ ಕೌಲ್ ಹಾಗೂ ಬಿ.ಆರ್. ಗವಾಯಿ ಅವರ ಪೀಠ ವಿಚಾರಣೆ ನಡೆಸಿದ್ದು, ಈ ವಿಚಾರದಲ್ಲಿ ನ್ಯಾಯಪೀಠ ತಜ್ಞ ಸಂಸ್ಥೆ ಅಲ್ಲ. ಈ ವಿಷಯವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ತಿಳಿಸಬಹುದು. ಈ ಕುರಿತು ಅವರು ಪರಿಶೀಲನೆ ಮಾಡಬಹುದು ಎಂದು ತಿಳಿಸಿದೆ.
ಪಿಬಿಟಿ ಅಧ್ಯಕ್ಷ ವೈದ್ಯ ಕುನಾಲ್ ಸಾಹಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಿದ್ದು, ಕೊರೊನಾ ಸೋಂಕಿಗೆ ನೀಡುತ್ತಿರುವ ಚಿಕಿತ್ಸೆಯನ್ನು ಪ್ರಶ್ನೆ ಮಾಡುತ್ತಿಲ್ಲ. ಆದರೆ, ಹೈಡ್ರಾಕ್ಸಿಕ್ಲೊರೊಕ್ವಿನ್ ಹಾಗೂ ರೋಗನಿರೋಧಕ ಅಜಿಟ್ರೊಮೈಸಿನ್ ಔಷಧದಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಅಮೆರಿಕದ ಹೃದ್ರೋಗ ಸಂಸ್ಥೆ ಗಂಭೀರವಾದ ಎಚ್ಚರಿಕೆ ನೀಡಿದ್ದು, ಇದನ್ನು ಪರಿಗಣಿಸಬೇಕಾಗಿ ಮನವಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕಿಗೆ ಪ್ರಸ್ತುತ ಯಾವುದೇ ಔಷಧ ಇಲ್ಲದಿರುವುದರಿಂದ ವಿವಿಧ ಔಷಧಗಳಿಂದ ಚಿಕಿತ್ಸೆ ನೀಡಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಯಾವ ರೀತಿಯಾದ ಚಿಕಿತ್ಸೆ ನೀಡಬೇಕೆನ್ನುವುದು ವೈದ್ಯರ ತೀರ್ಮಾನವಾಗಿದೆ. ನ್ಯಾಯಾಲಯವು ಈ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.