ಬೆಂಗಳೂರು, ಎ.30 (DaijiworldNews/PY) : ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜನರಿಗೆ ಏನು ಆಶ್ವಾಸನೆ ಕೊಟ್ಟರೋ ಅದರಲ್ಲಿ ಒಂದೇ ಒಂದೂ ಕಾರ್ಯ ರೂಪಕ್ಕೆ ಬಂದಿಲ್ಲ. ಆಹಾರ ವಿತರಣೆಯಲ್ಲಿ ಶೇ.20 ರಷ್ಟು ಕೆಲಸ ಆಗಿರೋದು ಬಿಟ್ಟರೆ, ಆರೋಗ್ಯ ವಿಷಯದಿಂದ ಹಿಡಿದು ಕಾರ್ಮಿಕರ ಸಮಸ್ಯೆವರೆಗೂ ಎಲ್ಲೂ ಕೆಲಸ ಆಗಿಲ್ಲಎ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಲಾಕ್ಡೌನ್ ಹಿನ್ನೆಲೆ ರೈತರು, ಶ್ರಮಿಕ ವರ್ಗದವರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಹಿಡಿಯಲು ಗುರುವಾರ ವಿಧಾನಸೌಧದಲ್ಲಿ ಕರೆದಿದ್ದ ಪ್ರತಿಪಕ್ಷಗಳು, ರೈತರು ಮತ್ತಿತರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ನೀಡಿರುವ ಸಹಕಾರ ಕಾಲಾವಕಾಶ ಮುಗಿದಿದೆ, ಬಡವರಿಗೆ ಹಂಚಿಕೆಯಾಗುತ್ತಿರುವ ಅಕ್ಕಿಯಿಂದ ಹಿಡಿದು, ಹಾಲು, ತರಕಾರಿ, ದಿನಸಿಯವರೆಗೂ ಭ್ರಷ್ಟಾಚಾರ ನಡೆಯುತ್ತಿದೆ. ಇನ್ನು ನಾವು ಸರ್ಕಾರದ ವೈಫಲ್ಯಗಳ ವಿರುದ್ದ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ತಿಳಿಸಿದರು.
ನಾವು ಕಳೆದ ಒಂದು ತಿಂಗಳಿಂದ ಸಂಕಷ್ಟದ ಸಮಯದಲ್ಲಿ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇವೆ. ರಾಜ ಕಾರಣ ಮಾಡಬಾರದು ಹಾಗೂ ಮಾಣವೀಯತೆಯ ದೃಷ್ಟಿಯಿಂದ ನಾವು ಸಕಾರದೊಂದಿಗೆ ಕೈಜೋಡಿಸಿದ್ದೇವೆ. ಸರ್ಕಾರವು ಕಳೆದ 40 ದಿನಗಳಲ್ಲಿ ಏನು ಮಾಡಿದೆ ಎಂಬುದನ್ನು ನೀವೆಲ್ಲಾ ನೋಡಿದ್ದೀರಿ. ಪ್ರತಿ ವಿಚಾರದಲ್ಲೂ ದಂಧೆ ನಡೆಯುತ್ತಿದೆ. ಇದನ್ನು ನೋಡಿಕೊಂಡು ಕೂರಲು ಇನ್ನು ಸಾಧ್ಯವಿಲ್ಲ ಎಂದು ಹೇಳಿದರು.
ಜನರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಏನು ಆಶ್ವಾಸನೆ ಕೊಟ್ಟರೋ ಅದರಲ್ಲಿ ಒಂದೇ ಒಂದೂ ಕಾರ್ಯ ರೂಪಕ್ಕೆ ಬಂದಿಲ್ಲ. ಆಹಾರ ವಿತರಣೆಯಲ್ಲಿ ಶೇ.20 ರಷ್ಟು ಕೆಲಸ ಆಗಿರೋದು ಬಿಟ್ಟರೆ, ಆರೋಗ್ಯ ವಿಷಯದಿಂದ ಹಿಡಿದು ಕಾರ್ಮಿಕರ ಸಮಸ್ಯೆವರೆಗೂ ಎಲ್ಲೂ ಕಾರ್ಯವಾಗಿಲ್ಲ. ಪಿಂಚಣಿ ಹಣ ಕೂಡ ಸರಿಯಾಗಿ ಫಲಾನುಭವಿಗಳಿಗೆ ತಲುಪಿಲ್ಲ ಎಂಬುದು ಆದಾಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದಾಗ ತಿಳಿದಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದರು.
ಕೊರೊನಾ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷ, ಸಂಘಟನೆಗಳೆನ್ನದೇ ಸ್ವಹಿತಾಸಕ್ತಿ ಮರೆತು ರಸ್ತೆಗಿಳಿದು ಜನರಿಗೆ ಸಹಾಯ ಮಾಡಿವೆ. ಈ ವಿಚಾರವಾಗಿ ನಾವು ರಾಜಕಾರಣ ಮಾಡಿಲ್ಲ. ಆದರೆ ಈಗ ಸಮಯ ಮೀರುತ್ತಿದೆ. ಇನ್ನು ನಾವು ಸುಮ್ಮನೇ ಕುಳಿತರೆ ಜನರಿಗೆ ಹಾಗೂ ನಮ್ಮ ಜವಾಬ್ದಾರಿಗೆ ಮೋಸ ಮಾಡಿದಂತಾಗುತ್ತದೆ. ಸರ್ಕಾರ ಇದುವರೆಗೆ ಒಂದೇ ಒಂದು ಕಡೆ ತರಕಾರಿಗಳನ್ನು ಖರೀದಿ ಮಾಡಿರುವ ದಾಖಲೆ ನಿಮ್ಮ ಬಳಿ ಇದ್ದರೆ ಕೊಡಿ. ಅವರು ಖರೀದಿ ಮಾಡಿಲ್ಲ. ಹೊರ ರಾಜ್ಯಗಳಿಗೆ ಕಳುಹಿಸಿದ್ದೀರಾ. ಅದಕ್ಕೆ ಅವಕಾಶ ದೊರಕಿದೆಯಾ. ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಕಂತಿನ ವಿನಾಯಿತಿ, ಬಡ್ಡಿ ಮನ್ನಾ ಅಥವಾ ವಿಮೆ ಕಂತು ತಡವಾಗಿ ಕಟ್ಟಲು ವಾಹನ ಸಾಲ ಪಡೆದಿರುವವರಿಗೆ ಅವಕಾಶ ಕಲ್ಪಿಸಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ಇಷ್ಟು ಬೇಜವಾಬ್ದಾರಿಯಾಗಿ ವರ್ತಿಸಿಕೊಂಡಿರುವುದನ್ನು ಇಲ್ಲಿಯವರೆಗೆ ನಾನು ನೋಡಿರಲಿಲ್ಲ. ವಿರೋಧ ಪಕ್ಷದ ಪ್ರತಿನಿಧಿಗಳಾಗಿ ನಮ್ಮ ನಾಯಕರು ವಾಹನ ಚಾಲಕರಿಂದ, ಅಸಂಘಟಿತ ಕಾರ್ಮಿಕರವರೆಗೂ ಸಮಾಜದ ಎಲ್ಲ ವರ್ಗದವರನ್ನು ಕರೆದು ಮಾತನಾಡಿ ಅವರ ಕಷ್ಟಕ್ಕೆ ಧ್ವನಿಯಾಗಿದ್ದೇವೆ. ಜನಪ್ರತಿನಿಧಿಗಳಾಗಿರುವ ನಿಮ್ಮನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ನಾವು ಸಿದ್ಧವಿದ್ದೇವೆ. ನಿಮ್ಮ ಸಹಕಾರವಿರಲಿ ಎಂದು ಹೇಳಿದರು.
ಫಲಗಳು ತೋಟದಲ್ಲಿ ಕೊಳೆಯುತ್ತಿವೆ. ತೋಟದೊಳಗೆ ಕಾಲಿಡಲು ಮುಸಲ್ಮಾನ ವ್ಯಾಪಾರಿಗಳಿಗೆ ಅವಕಾಶ ಕೊಡುತ್ತಿಲ್ಲ. ಕೋಳಿಗಳನ್ನು ಮಣ್ಣಲ್ಲಿ ಜೀವಂತವಾಗಿ ಮುಚ್ಚಿದ್ದಾರೆ. ಇವೆಲ್ಲವನ್ನೂ ನೋಡಿದರೆ ಇಂದು ಎಲ್ಲಾ ವರ್ಗದ ಜನರ ಬದುಕು ಶೋಚನೀಯವಾಗಿದೆ. ಈ ವರ್ಗದ ಜನರನ್ನು ಸಾಯುವಂತೆ ಮಾಡಲಾಗಿದೆ. ಹಾಗಾಗಿ ಅಂತವರಿಗೆ ಮತ್ತೆ ಜೀವ ತುಂಬಲು ನಿಮ್ಮ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ವಿರೋಧ ಪಕ್ಷದ ನಾಯಕರು ಸಭೆ ಕರೆದಿದ್ದಾರೆ. ಈ ರಾಜ್ಯದ ಜನತೆಯ ಜೀವ ಹಾಗೂ ಜೀವನವನ್ನು ಉಳಿಸಲು ನಾವೆಲ್ಲ ಒಟ್ಟಾಗಿ ಒಂದು ಯೋಜನೆ ರೂಪಿಸಿ ಶ್ರಮಿಸೋಣ ಎಂದು ತಿಳಿಸಿದರು.