ಬೆಂಗಳೂರು, ಮೇ.01 (DaijiworldNews/PY) : ಲಾಕ್ಡೌನ್ ಸ್ಥಿತಿಯಲ್ಲೇ ಬಹಳ ದಿನ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸತ್ಯ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ದಿನ ಲಾಕ್ಡೌನ್ ಸ್ಥಿತಿಯಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸತ್ಯ. ಒಟ್ಟಾರೆಯಾಗಿ ದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ, ಸಾವಿನ ಪ್ರಮಾಣ ಶೇ.0.25-0.5ನಷ್ಟಿದೆ. ಈ ಪ್ರಮಾಣ ಅಭಿವೃದ್ದಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಕಡಿಮೆಯಿದೆ ಎಂದರು.
ಲಾಕ್ಡೌನ್ ಅನ್ನು ದೀರ್ಘಕಾಲದವರೆಗೆ ವಿಸ್ತರಣೆ ಮಾಡಿದರೆ ದೇಶದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಕೊರೊನಾ ವೈರಸ್ ಸಾಂಕ್ರಾಮಿಕಕ್ಕಿಂತಲೂ ಅಧಿಕವಾಗಿರುತ್ತದೆ ಎಂದು ತಿಳಿಸಿದರು.
ಪ್ರತಿವರ್ಷ ದೇಶದಲ್ಲಿ 90 ಲಕ್ಷ ಜನರು ಬೇರೆ ಬೇರೆ ಕಾರಣಗಳಿಂದ ಮೃತಪಡುತ್ತಾರೆ. ಇದರಲ್ಲಿ ಕಾಳು ಭಾಗದಷ್ಟು ಜನರು ಮಾಲಿನ್ಯದ ಕಾರಣದಿಂದ ಸಾವಿಗೀಡಾಗುತ್ತಾರೆ. ಕಾರಣವೆಂದರೆ, ವಿಶ್ವದ ಅತಿ ಮಾಲಿನ್ಯ ದೇಶಗಳಲ್ಲಿ ಭಾರತವು ಒಂದಾಗಿದೆ ಎಂದರು.
ಕೊರೊನಾ ವೈರಸ್ಗೆ ಎರಡು ತಿಂಗಳ ಅವಧಿಯಲ್ಲಿ 1 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಈ ಸಂಖ್ಯೆಯನ್ನು ಪ್ರತಿವರ್ಷ ನೈಸರ್ಗಿಕವಾಗಿ ಸಾಯುವ 90 ಲಕ್ಷ ಮಂದಿಗೆ ಹೋಲಿಸಿದರೆ ನಗಣ್ಯ. ಹಾಗಾಗಿ, ಕೊರೊನಾ ವೈರಸ್ ಅನ್ನು ಭಾರತ ಹೊಸ ಸಾಮಾನ್ಯ ಸಂಕಷ್ಟ ಎಂದು ಪರಿಗಣಿಸಿ ಅದರೊಂದಿಗೆ ದುರ್ಬಲರನ್ನು ರಕ್ಷಿಸಿ, ಕೆಲಸಕ್ಕೆ ಮರಳಲು ದೈಹಿಕವಾಗಿ ಸಮರ್ಥರಾಗಿರುವವರಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ಸುಮಾರು 19 ಕೋಟಿ ಭಾರತೀಯರು ಅಸಂಘಟಿಕ ವಲಯದಲ್ಲಿಇಲ್ಲವೇ ಸ್ವಯಂ ಉದ್ಯೋಗದಲ್ಲಿದ್ದಾರೆ. ತಮ್ಮ ವ್ಯಾಪಾರದ ಶೇ.15-20ರಷ್ಟು ಆದಾಯವನ್ನು ಬಹುತೇಕ ಉದ್ಯಮಗಳು ಕಳೆದುಕೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯವೂ ಕಡಿಮೆಯಗಲಿದೆ ಎಂದು ಹೇಳಿದರು.