ಬೆಂಗಳೂರು, ಮೇ.01 (DaijiworldNews/PY) : ಪಟ್ಟಾಭೂಮಿ, ಕೆರೆ, ಗ್ರಾಮೀಣ ಭಾಗದ ಹಳ್ಳ, ತಗ್ಗು ಪ್ರದೇಶಗಳಲ್ಲಿ ಮರಳು ತೆಗೆಯಲು ಅವಕಾಶ ಕೊಡುವ ನೂತನ ಮರಳು ನೀತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಅಕ್ರಮ ಮರಳು ದಂಧೆಗೂ ಕಡಿವಾಣ ಬೀಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಸಚಿವ ಸಂಪುಟದ ಬಳಿಕ ಮಾತನಾಡಿದ ಅವರು, ಇಲ್ಲಿಯವರೆಗೂ ನದಿ ಮಾತ್ರಗಳಲ್ಲಿ ಕೆಲವು ಮರಳು ಬ್ಲಾಕ್ ಗುರುತಿಸಿ ಹರಾಜು ಹಾಕಲು ಅವಕಾಶವಿತ್ತು. ಪಟ್ಟಾಭೂಮಿ, ಕೆರೆ, ಗ್ರಾಮೀಣ ಭಾಗದ ಹಳ್ಳ, ತಗ್ಗು ಪ್ರದೇಶಗಳಲ್ಲೂ ಮರಳು ತೆಗೆಯಲು ಅವಕಾಶ ಕಲ್ಲಿಸಲಾಗಿದೆ. ಅಲ್ಲದೇ, ಇದರ ಜೊತೆ ಅಕ್ರಮ ಮರಳು ದಂಧೆಗೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಆಯಾ ತಾಲೂಕಿನ ದಂಡಾಧಿಕಾರಿಗಳಾಗಿರುವ ತಹಶೀಲ್ದಾರ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಮರಳು ತೆಗೆಯುವ ಪ್ರದೇಶವನ್ನು ಗುರುತಿಸಿ ಗ್ರಾಮ ಪಂಚಾಯತ್ ಒಪ್ಪಿಗೆಯೊಂದಿಗೆ ಅನುಮತಿ ನೀಡಲಿದ್ದಾರೆ.
ಸ್ಥಳೀಯವಾಗಿ ಜನತಾ ಮನೆ, ಸಣ್ಣ ಪುಟ್ಟ ಕಾಮಗಾರಿಗೆ ಮರಳನ್ನು ಉಪಯೋಗಿಸಬಹದು. ಅಲ್ಲದೇ, ಪ್ರತೀ ಮೆಟ್ರಿಕ್ ಟನ್ಗೆ 700 ರೂ.ವರೆಗೆ ಬೆಲೆ ನಿಗದಿ ಮಾಡಲಾಗುತ್ತದೆ. ದಂಡಾಧಿಕಾರಿಗಳಿಗೆ ಬೆಲೆ ನಿಗದಿಯಲ್ಲೂ ಅಧಿಕಾರ ಇರಲಿದೆ ಎಂದು ಜೆ.ಸಿ. ಮಾಧುಸ್ವಾಮಿ ಅವರು ಹೇಳಿದ್ದಾರೆ.