ಮುಂಬೈ, ಮೇ 1 (Daijiworld News/MSP): ಕೊರೊನಾ ಚಿಕಿತ್ಸೆಗೆ ರಾಮಬಾಣವೆಂದು ಹೇಳಲಾಗುತ್ತಿರುವ ಪ್ಲಾಸ್ಮಾ ಥೆರಪಿಯ ಭರವಸೆ ಕ್ಷೀಣಿಸುತ್ತಿದೆಯ ಎಂಬ ಅನುಮಾನ ಕಾಡತೊಡಗಿದೆ. ಮೊತ್ತ ಮೊದಲ ಬಾರಿಗೆ ಮಹಾರಾಷ್ಟದಲ್ಲಿ ಕೊರೊನಾ ವೈರಸ್ ರೋಗಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿದ್ದು, ಆ ರೋಗಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕೊರೋನಾಗೆ ದೇಶದಲ್ಲೇ ಇದೇ ಮೊದಲ ಬಾರಿಗೆ ಪ್ಲಾಸ್ಮಾ ಚಿಕಿತ್ಸೆ ಪಡೆದು ದೆಹಲಿಯ ರೋಗಿಯೊಬ್ಬರು ಗುಣಮುಖರಾದ ಬೆನ್ನಲೇ, ಮೊದಲ ಸಾವಿನ ಸುದ್ದಿಯೂ ಬಂದಿದೆ. ಮಹಾರಾಷ್ಟ್ರದ ಲೀಲಾವತಿ ಆಸ್ಪತ್ರೆಯಲ್ಲಿ 53 ವರ್ಷದ ವ್ಯಕ್ತಿಗೆ ಏ.25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ರೋಗಿ ಆರಂಭದಲ್ಲಿ ಸುಧಾರಿಸಿದರೂ ಆ ಬಳಿಕ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡತೊಡಗಿತ್ತು. ಆ ಬಳಿಕ ಪ್ಲಾಸ್ಮಾ ಚಿಕಿತ್ಸೆ ಪಡೆದ ಮೊದಲ ವ್ಯಕ್ತಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಕೊರೊನಾಗೆ ಪ್ಲಾಸ್ಮಾ ಚಿಕಿತ್ಸೆ ಅಂಗೀಕೃತವಲ್ಲ, ಅದನ್ನು ಸರಿಯಾದ ವಿಧಾನದಲ್ಲಿ ನಡೆಸದಿದ್ದರೆ ಸಾವು ಸಂಭವಿಸಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡದ ಬೆನ್ನಲ್ಲೇ ಈ ಘಟನೆಯೂ ನಡೆದಿದೆ.