ರಾಜಸ್ಥಾನ, ಮೇ 1 (Daijiworld News/MSP): : ಮದ್ಯ ಸೇವನೆ ಮಾಡಿದರೆ ಕೊರೊನಾ ವೈರಸ್ ನಿಂದ ಪಾರಾಗಬಹುದು ಎನ್ನುವ ಸುದ್ದಿ ಕೊರೊನಾ ಸಾವಿನ ತಾಂಡವದ ನಡುವೆಯೂ ಜೋರಾಗಿ ಕೇಳಿಬರುತ್ತಿದೆ. ಇದನ್ನು, ವೈದ್ಯರಾಗಲಿ, ಸರಕಾರವಾಗಲಿ ಎಲ್ಲೂ ಹೇಳಿಲ್ಲ. ಆದರೆ, ಇಂತಹ ಸುಳ್ಳು ಸುದ್ದಿ ಮಾತ್ರ ದಟ್ಟವಾಗಿ ಹರಡುತ್ತಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ದೇಶ ವಿದೇಶದಲ್ಲೂ ಕೊರೊನಾದಿಂದ ಬಚಾವ್ ಆಗಲೂ ಕಳ್ಳಬಟ್ಟಿ ಕುಡಿದು ಮೃತಪಟ್ಟವರ ಸಂಖ್ಯೆಗೇನು ಕಡಿಮೆ ಇಲ್ಲ.
ಇನ್ನೊಂದೆಡೆ ವಿಶ್ವದಾದ್ಯಂತ ವಿಜ್ಞಾನಿಗಳು , ಸಂಶೋಧಕರು ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯಲು ಶ್ರಮಿಸುತ್ತಿದ್ದಾರೆ. ಈ ನಡುವೆ ರಾಜಸ್ಥಾನದ ಶಾಸಕರೊಬ್ಬರು ಕೊರೊನಾಗೆ ಮದ್ಯವೇ ಮದ್ದು ಎಂದು ಹೇಳಿದ್ದಾರೆ.
" ವೈನ್ ಶಾಪ್ ತೆರೆಯಲು ಅನುಮತಿ ನೀಡಬೇಕು" ಎಂದು ರಾಜಸ್ಥಾನದ ಶಾಸಕ ಭರತ್ ಸಿಂಗ್ ಅವರು ಸಿಎಂ ಅಶೋಕ್ ಗೆಹ್ಲೋಟ್ ಗೆ ಪತ್ರ ಬರೆದಿದ್ದು, ಮದ್ಯ ಸೇವನೆಯಿಂದ ಗಂಟಲಿನಲ್ಲಿರುವ ಕೊರೊನಾ ವೈರಸ್ ಸತ್ತು ಹೋಗುತ್ತದೆ ಎಂದು ಹೇಳಿದ್ದಾರೆ.
ಅಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಬಳಕೆಯಿಂದ ಕೈಯಲ್ಲಿರುವ ಕೊರೊನಾ ವೈರಸ್ ಸಾಯುತ್ತದೆ. ಅದೇ ರೀತಿ ಮದ್ಯಸೇವನೆಯಿಂದ ಗಂಟಲಿನಲ್ಲಿರುವ ಕೊರೊನಾ ವೈರಸ್ ಸತ್ತುಹೋಗುತ್ತದೆ ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ ಎಂದು ಶಾಸಕ ಭರತ್ ಸಿಂಗ್ ಸಿಎಂಗೆ ಪತ್ರ ಬರೆದಿದ್ದಾರೆ.