ಲಕ್ನೋ, ಮೇ.01 (DaijiworldNews/PY) : ತನ್ನ ಕುಟುಂಬದ ಆರು ಜನರನ್ನು ಆಸ್ತಿ ವಿಚಾರಕ್ಕಾಗಿ ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಕ್ನೋದ ಹೊರವಲಯದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೈದ ಆರೋಪಿಯನ್ನು ಅಜಯ್ ಸಿಂಗ್ (26) ಎಂದು ಗುರುತಿಸಲಾಗಿದೆ.
ಆರೋಪಿ ಅಜಯ್ ಸಿಂಗ್ ತನ್ನ ಕುಟುಂದೊಂದಿಗೆ ಆಸ್ತಿ ವಿವಾದ ಸಂಬಂಧ ಮಾತಿಗೆ ಇಳಿದ ಸಂದರ್ಭ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಈ ಸಂದರ್ಭ ಆರೋಪಿ ಅಜಯ್ ಸಿಂಗ್ ಚೂಪಾದ ಆಯುಧಗಳಿಂದ ಕುಟುಂಬದ ಸದಸ್ಯರ ಮೇಲೆ ದಾಳಿ ನಡೆಸಿದ್ದಾನೆ. ದಾಳಿ ನಡೆಸಿದ ಪರಿಣಾಮ, ಆರೋಪಿಯ ತಾಯಿ, ತಂದೆ, ಹಿರಿಯ ಸಹೋದರ, ಅತ್ತಿಗೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಅಮರ್(60), ರಮಾಸಖಿ(55), ಅರುಣ್(40), ರಾಮ್ದುಲರಿ(35), ಸೌರಭ್(7) ಮತ್ತು ಸಾರಿಕ(2) ಎನ್ನಲಾಗಿದೆ.
ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಬಳಿಕ ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದ್ದಾರೆ.