ಮುಂಬೈ, ಮೇ.01 (DaijiworldNews/PY) : ಲಾಕ್ಡೌನ್ನ ಪರಿಣಾಮದಿಂದಾಗಿ ಎಲ್ಲಾ ಕಂಪೆನಿಗಳು ನಷ್ಟದ ಸುಳಿವಿಗೆ ಸಿಲುಕಿದ್ದು, ನೌಕರರ ವೇತನವನ್ನು ಕಡಿತಗೊಳಿಸಲು ಒಂದೊಂದೇ ಕಂಪೆನಿಗಳು ತೀರ್ಮಾನಿಸುತ್ತಿವೆ. ಇದೀಗ ದೇಶದ ಬೃಹತ್ ಕಂಪೆನಿ, ಮುಕೇಶ್ ಅಂಬಾನಿ ಅವರ ಮಾಲೀಕತ್ವದ ರಿಲಯನ್ಸ್ ಕೂಡಾ ಬಹುತೇಕವಾಗಿ ನೌಕರರ ವೇತನವನ್ನು ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಅಲ್ಲದೇ, ತಮ್ಮ ಸಂಪೂರ್ಣ ವೇತನವನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ.
ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರಿಗೆ ಸತತವಾಗಿ 11 ವರ್ಷಗಳಿಂದ ಸುಮಾರು 15ಕೋಟಿ.ರೂ ಸಂಭಾವನೆ ಪಡೆಯುತ್ತಿದ್ದಾರೆ. ವಾರ್ಷಿಕವಾಗಿ 15 ಲಕ್ಷ ರೂ. ಪಡೆಯುವವರಿಗೆ ರಿಲಯನ್ಸ್ ವೇತನ ಕಡಿತಗೊಳಿಸುವುದಿಲ್ಲ. ಬದಲಾಗಿ 15 ಲಕ್ಷ ರೂ. ಗಿಂತ ಅಧಿಕ ಸಂಭಾವನೆ ಇದ್ದವರಿಗೆ ಶೇ.10ರಿಂದ 50ರವರೆಗೆ ಸಂಭಾವನೆ ಕಡಿತಗೊಳ್ಳಲಿದೆ. ಶೇ.30ರಿಂದ 50ರಷ್ಟು ವೇತನವನ್ನು ಕಂಪೆನಿಯ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ನಾಯಕರು ಬಿಟ್ಟುಕೊಡಲಿದ್ದಾರೆ.
ರಿಯನ್ಸ್ನ ಬಹು ನಿರೀಕ್ಷಿತವಾದ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದ್ದು, 2020ರ ಜನವರಿಯಿಂದ ಮಾರ್ಚ್ವರೆಗಿನ ಮೊದಲ ತ್ರೈಮಾಸಿಕ ಫಲಿತಾಂಶದಲ್ಲಿ ನಷ್ಟ ಮುಖ್ಯ ವಿಷಯವಾಗಿದೆ. ತೈಲ ಬೆಲೆಯು ಕುಸಿತವಾಗುವುದರಿಂದ, ತೈಲ ಸಂಸ್ಕರಣ ಘಟಕಗಳು ನಷ್ಟ ಅನುಭವಿಸಿವೆ. ಶೇ.39ರಷ್ಟು ನಿವ್ವಳ ಲಾಭ ಕುಸಿದಿದ್ದು, 6348 ಕೋಟಿ ರೂ.ಗೆ ತಲುಪಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಕಂಪೆನಿಯು ಸುಮಾರು 10,362 ಕೋಟಿ ರೂ. ಲಾಭ ಗಳಿಸಿತ್ತು. ದೂರಸಂಪರ್ಕದಿಂದ ಹಿಡಿದು ತೈಲದವರೆಗೆ ರಿಲಯನ್ಸ್ ಆದಾಯ ಒಟ್ಟಾರೆಯಾಗಿ 1,39,283 ಕೋಟಿ ರೂ.ಗೆ ಇಳಿಕೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸುಮಾರು 1,42,565 ಕೋಟಿ ರೂ. ಆದಾಯವಿದ್ದು, ಈ ಸಂದರ್ಭ ಕಂಪೆನಿಯು 53,125 ಕೋಟಿ ರೂ. ಹಣ ಸಂಗ್ರಹಿಸುವ ಮಹತ್ವದ ಯೋಜನೆಗೆ ಒಪ್ಪಿಗೆ ನೀಡಿತ್ತು.