ಬೆಂಗಳೂರು, ಮೇ.01 (DaijiworldNews/PY) : ಮುಂಬೈನಿಂದ ಸೋಂಕನ್ನು ತರುವ ಮೂಲಕ ಗ್ರೀನ್ಜೋನ್ನಲ್ಲಿದ್ದ ಜಿಲ್ಲೆಗೆ ಸರ್ಕಾರವೇ ಸೋಂಕು ಹರಡುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಿಂದೆ ರಾಮನಗರಕ್ಕೆ ಸರ್ಕಾರ ಕೊರೊನಾ ತಂದಿಟ್ಟಿತ್ತು. ಇದೀಗ ಮಂಡ್ಯಕ್ಕೂ ತಂದಿಟ್ಟಿದ್ದು, ಇದರ ಹಿಂದೆ ರಾಜಕೀಯ ಶಂಕೆಯಿದೆ ಎಂದರು.
ಮಂಡ್ಯಕ್ಕೆ ತಂದಿದ್ದ ಮೃತ ವ್ಯಕ್ತಿಯೊಂದಿಗೆ ಬಂದಿದ್ದವರಲ್ಲಿ 5 ಮಂದಿಗೆ ಪಾಸಿಟಿವ್ ಇತ್ತು. ಮಂಡ್ಯ ಜಿಲ್ಲೆಗೆ ಮುಂಬೈನಿಂದ ಸುಮಾರು 7 ರಿಂದ 8 ಸಾವಿರ ಮಂದಿ ಬಂದಿದ್ದಾರೆ. ಅವರನ್ನು ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡಿಲ್ಲ. ಮುಂದೆ ಇಲ್ಲಿನ ಜನರು ಸಂಕಷ್ಟಕ್ಕೊಳಗಾಗುವ ದಿನಗಳು ಎದುರಾಗಲಿವೆ ಎಂದು ಹೇಳಿದರು.
ಕೊರೊನಾ ಸೋಂಕಿನಿಂದ ಮೃತರು ಸತ್ತಿದ್ದಾರೋ ಇಲ್ಲವೋ ತಿಳಿದಿಲ್ಲ. ಆದರೆ, ನಕಲಿ ದಾಖಲೆ ಸೃಷ್ಠಿ ಮಾಡಿ ಮೃತದೇಹ ತಂದಿದ್ದಾರೆ. ಇಂತಹ ಅಧಿಕಾರಗಳ ವಿರುದ್ದ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕಿದ ಎಂದು ತಿಳಿಸಿದರು.