ಹಾವೇರಿ, ಮೇ.01 (DaijiworldNews/PY) : ರಾಜ್ಯದಲ್ಲಿ ಕಳಪೆ ಗುಣಮಟ್ಟದ ಹಾಗೂ ನಕಲಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ಜಾಲದ ವಿರುದ್ದ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ವಿಜಯವಾಡ ಸೇರಿದಂತೆ ಅನೇಕ ಕಡೆ ನಕಲಿ ಬೀಜದ ಮೂಲ ಇದೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಷಾಧನೀಯ. ಗೃಹ ಮಂತ್ರಿ, ಡಿಜಿಪಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ. ಈ ಬಗ್ಗೆಯೂ ಕ್ರಮ ತೆಗೆದುಕೊಳ್ಳದಿದ್ದರೆ ರೈತರಿಗೆ ಅಪಚಾರವೆಸಗಿದಂತೆ ಆಗುತ್ತದೆ. ಇದು ರೈತರನ್ನು ಜೀವಂತ ಸಮಾಧಿ ಮಾಡುವ ಕಾರ್ಯ ಎಂದರು.
ಮುಸುಕಿನ ಜೋಳ, ಸೂರ್ಯಕಾಂತಿ ಸೇರಿದಂತೆ ಅನೇಕ ಬೀಜ ವಶಪಡಿಸಿಕೊಂಡಿದ್ದಾರೆ. ರಾಜ್ಯದ ಹಾವೇರಿ, ಧಾರವಾಡ, ಬಳ್ಳಾರಿ 1685 ಕ್ಚಿಂಟಲ್ ಕಳಪೆ ಬೀಜ ವಶ ಪಡಿಸಿಕೊಳ್ಳಲಾಗಿದೆ. ಕಳಪೆ ಬೀಜ ಮಾರಾಟ ಮಾಡುವ ಮೂಲವನ್ನು ಬೇರು ಸಹಿತ ತೆಗೆಯಬೇಕಾಗಿದೆ. ಇಲ್ಲವಾದಲ್ಲಿ ಆ ಮಾರಾಟ ಜಾಲ ಹಾಗೇ ಮುಂದುವರೆಯುತ್ತದೆ. ಈವರೆಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ಬೇಸರದ ಸಂಗತಿ ಎಂದು ತಿಳಿಸಿದರು.
ರಾಜ್ಯದಲ್ಲಿ ಯಾವುದೇ ಬೀಜ, ಗೊಬ್ಬರದ ಕೊರತೆಯಿಲ್ಲ. ಕೀಟ ನಾಶಕಗಳು ಕಳಪೆಯಾಗಿರುವುದು ಗಮನಕ್ಕೆ ಬಂದಿದೆ. ಅಂತವರ ವಿರುದ್ದ ಕ್ರಮ ತೆಗೆದುಕೊಂಡು, ಲೈಸೆನ್ಸ್ ರದ್ದು ಮಾಡಲು ಆದೇಶ ಮಾಡಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮೆಕ್ಕೆಜೋಳ ಖರೀದಿ ಮಾಡಲು ಬೆಂಬಲ ಬೆಲೆ ಘೋಷಿಸಲಾಗಿದೆ. ಮೆಕ್ಕೆಜೋಳವನ್ನು 1760 ರೂಪಾಯಿಗೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗುವುದು ಎಂದು ತಿಳಿಸಿದರು.