ಬೆಂಗಳೂರು, ಮೇ 2 (Daijiworld News/MSP): ಲಾಕ್ ಡೌನ್ ಕಾರಣದಿಂದಾಗಿ ಈ ಹಿಂದೆ ನಡೆಯಬೇಕಾಗಿದ್ದ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಸೇರಿದಂತೆ ಹಲವು ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಇದೀಗ ಲಾಕ್ ಡೌನ್ ಮೇ 17ರವರೆಗೆ ಮುಂದುವರಿಯುವುದರಿಂದ ಪರೀಕ್ಷೆಗಳನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಲಾಗುತ್ತಿದೆ.
ಆದರೆ ಪರೀಕ್ಷೆಗಳನ್ನು ಮುಂದೂಡಿದರೂ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದೆ. ಮೇ ೩ ರ ಬಳಿಕ ಪರಿಸ್ಥಿತಿ ಅವಲೋಕಿಸಿ ಶೀಘ್ರದಲ್ಲೇ ಎಸೆಸೆಲ್ಸಿ ಪರೀಕ್ಷೆ ಮತ್ತು ಪರೀಷ್ಕೃತ ವೇಳಾಪಟ್ಟಿಯ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡಲಿದ್ದಾರೆ.
ಮಾಸ್ಕ್ ಮತ್ತು ಸಾಮಾಜಿಕ ಅಂತರದ ನಿಯಮದಡಿ ಪರೀಕ್ಷೆ ನಡೆಸಬೇಕಾಗಿರುವುದರಿಂದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಸಾಮಾಜಿಕ ಅಂತರದ ದೃಷ್ಟಿಯಿಂದ ಈಗೀರುವ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚುವರಿ ಕೊಠಡಿಗಳ ಬಳಕೆಗೆ ಚಿಂತನೆ ನಡೆಸಲಾಗಿದೆ.
ಇನ್ನು ಬಸ್ ಸೇವೆ ಇಲ್ಲವೆಂದು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಬಸ್ ಸೇವೆ ಆರಂಭವಾದ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಸಾರಿಗೆ ವ್ಯವಸ್ಥೆ ಸುಗಮವಾದ ಬಳಿಕವೇ ಪರೀಕ್ಷೆ ನಡೆಯಲಿದ್ದು ನಡೆಯಲಿದ್ದು ಹೆತ್ತವರು ವಿದ್ಯಾರ್ಥಿಗಳು ಈ ಬಗ್ಗೆ ಚಿಂತೆಗೀಡಾಗುವುದು ಬೇಡ ಎಂದು ಮೂಲಗಳು ತಿಳಿಸಿವೆ.