ಕಲಬುರಗಿ, ಮೇ 02 (Daijiworld News/MB) : ತಮ್ಮ ಖರ್ಚಿನಲ್ಲೇ ದೇಶದ ಯಾವುದೇ ರಾಜ್ಯದಲ್ಲಿ ಇರುವ ಕಾರ್ಮಿಕರು ಮತ್ತು ವಲಸೆಗಾರರು ರಾಜ್ಯಕ್ಕೆ ವಾಪಾಸ್ ಆಗಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಈ ಬಗ್ಗೆ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರು ತಮ್ಮ ರಾಜ್ಯಕ್ಕೆ ವಾಪಾಸ್ ಆಗಲು ಅವಕಾಶ ನೀಡಲಾಗಿದೆ. ಬೇರೆ ರಾಜ್ಯದಿಂದ ಬರುವವರು ಯಾರೇ ಆದರೂ ಸ್ವಂತ ಖರ್ಚಿನಲ್ಲೇ ರಾಜ್ಯಕ್ಕೆ ಆಗಮಿಸಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಈ ಸಂಬಂಧ 11 ಜನ ಅಧಿಕಾರಿಗಳ ತಂಡ ರಚನೆ ಮಾಡಿದೆ. ಸರ್ಕಾರ ವಾಹನದ ವ್ಯವಸ್ಥೆ ಮಾಡುವುದಿಲ್ಲ. ಒಂದೇ ಸ್ಥಳಕ್ಕೆ ಕಾರ್ಮಿಕರು ಸಾಮೂಹಿಕವಾಗಿ ಆಗಮಿಸುವುದಾದರೆ ಬೇಕಾದ್ದಲ್ಲಿ ಸಾರಿಗೆ ವ್ಯವಸ್ಥೆ ಮಾಡುತ್ತೇವೆ. ಆದರೆ ಇದರ ವೆಚ್ಚವನ್ನೂ ಅವರೇ ಪಾವತಿಸಬೇಕು ಎಂದಿದ್ದಾರೆ.
ಇನ್ನು ಬರುವ ಕಾರ್ಮಿಕರನ್ನು ಗಡಿಯಲ್ಲಿ ತಪಾಸಣೆ ಮಾಡಿ ಕಡ್ಡಾಯವಾಗಿ ಅವರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಬೇಕೆಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಜನರಿಗಾಗಿ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡಬಾರದು. ಸರ್ಕಾರಕ್ಕೆ ನೀವು ಒಂದು ರುಪಾಯಿಯನ್ನೂ ಉಳಿಸಬೇಕಿಲ್ಲ. ಜನರಿಗೆ ಸೌಕರ್ಯ ಕಲ್ಪಿಸಿ ಎಂದು ಹೇಳಿದ್ದಾರೆ.