ಬೆಂಗಳೂರು, ಮೇ.02 (DaijiworldNews/PY) : ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೇ ಅತಂತ್ರರಾಗಿರುವ ಒಂದು ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ಶನಿವಾರ ಸಚಿವ ಸುರೇಶ್ ಕುಮಾರ್ ಭೇಟಿ ಮಾಡಿದರು.
ಯಶವಂತಪುರದ ಎಪಿಎಂಸಿ ಹಾಗೂ ಮಾಹಡಿ ರಸ್ತೆಯ ಕಾವೇರಿಪುರ ಗುಡ್ಡದಲ್ಲಿ ಬಹುವಸತಿ ಸಮುಚ್ಚಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರನ್ನು ಭೇಟಿ ಮಾಡಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಬೃಹತ್ ನಿರ್ಮಾಣ ಚಟುವಟಿಕೆಗಳು ಬೆಂಗಳೂರು ನಗರದಲ್ಲಿ ಇಷ್ಟರಲ್ಲಿಯೇ ಪ್ರಾರಂಭವಾಗುವುದಿದ್ದು, ತಮ್ಮ ಕೆಲಸಗಳನ್ನು ಯಾವುದೇ ಭೀತಿಗೊಳಗಾಗದೇ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ತಮ್ಮೆಲ್ಲರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ಸದಾ ಬದ್ದವಾಗಿದೆ. ಎಲ್ಲಾ ಕಾರ್ಮಿಕರಿಗೆ ನೀಡಬೇಕಾದ ಬಾಕಿಯನ್ನು ತಕ್ಷಣವೇ ನೀಡಬೇಕು ಎಂದು ಕಟ್ಟಡ ಕಾರ್ಮಿಕರ ಮಾಲೀಕರಿಗೆ ತಿಳಿಸಿದರು. ತಕ್ಷಣದಿಂದ ಕಾಮಗಾರಿಗಳು ಆರಂಭವಾಗುವಂತೆ ಎಲ್ಲಾ ಪೂರ್ವಭಾವಿ ಕ್ರಮಗಳಿಗೆ ಆಗ್ರಹಿಸಿದರು.
ಬಳಿಕ ಕಾರ್ಮಿಕರಿಗೆ ಧಾನ್ಯಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಹೀಗೆ ಹಲವು ದಿನಗಳಿಂದ ಬೆಂಗಳೂರು ನಗರದ ಹಲವಾರು ಸ್ಥಳಗಳಲ್ಲಿ ನೆಲೆಸಿರುವ , ಜಾರ್ಖಂಡ್, ಉತ್ತರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳ ಸಾವಿರಾರು ಕೂಲಿ ಕಾರ್ಮಿಕರು ಆತಂಕದಿಂದ ತಮ್ಮ ಊರುಗಳಿಗೆ ಹೋಗಲು ಮುಂದಾಗುತ್ತಿದ್ದು, ಸರ್ಕಾರದ ಪರವಾಗಿ ಸಚಿವರು ಕೂಲಿ ಕಾರ್ಮಿಕರು ಇಲ್ಲಿಯೇ ನೆಲೆಸುವಂತೆ ಖುದ್ದಾಗಿ ತೆರಳಿ ಮನವಿ ಮಾಡುತ್ತಿದ್ದು, ಕೂಲಿ ಕಾರ್ಮಿಕರಿಗೆ ನಿರಂತರವಾದ ಕೆಲಸ ದೊರಕಿಸುವಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.