ಮಹಾರಾಷ್ಟ್ರ, ಮೇ 2 (Daijiworld News/MSP): ರಾಜ್ಯದ ಪ್ರತಿ ನಾಗರೀಕರಿಗೂ ಉಚಿತ ಮತ್ತು ನಗದುರಹಿತ ವಿಮಾ ರಕ್ಷಣೆಯನ್ನು ದೇಶದಲ್ಲೇ ಮೊತ್ತಮೊದಲ ಬಾರಿಗೆ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.
ರಾಜ್ಯ ಸರ್ಕಾರದ ಆರೋಗ್ಯ ಯೋಜನೆಯೂ ವಿಸ್ತರಿಸಿ ಮಹಾರಾಷ್ಟ್ರದ ಪ್ರತಿ ನಾಗರೀಕನಿಗೂ ಅನ್ವಯವಾಗುವಂತೆ ಆರೋಗ್ಯ ಸಚಿವ ರಾಜೇಶ್ ಟೊಪೆ ಘೋಷಿಸಿದ್ದಾರೆ.
ಮಹಾರಾಷ್ಟ್ರ ದಿನಾಚರಣೆ ಅಂಗವಾಗಿ ಮಹತ್ವದ ಘೋಷಣೆ ಮಾಡಿರುವ ಆರೋಗ್ಯ ಸಚಿವರು, "ಖಾಸಗಿ ಆಸ್ಪತ್ರೆಗಳು ಅನಾರೋಗ್ಯಪೀಡಿತರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಹಿಂದೆಯೇ ರಾಜ್ಯದ ಜನಸಂಖ್ಯೆಯ ಶೇಕಡಾ 85 ರಷ್ಟು ಜ್ಯೋತಿಬಾ ಫುಲೆ ಜಾನ್ ಆರೋಗ್ಯ ಯೋಜನೆ (ಎಂಜೆಪಿಜೆಎ) ವ್ಯಾಪ್ತಿಗೆ ಬರುತ್ತಾರೆ. ಇನ್ನುಳಿದ ಉಳಿದಿರುವ ಶೇ 15 ರಷ್ಟು ಸರ್ಕಾರಿ, ಅರೆ ಸರ್ಕಾರಿ ನೌಕರರು ಮತ್ತು ವೈಟ್ ರೇಷನ್ ಕಾರ್ಡ್ ಹೊಂದಿರುವವರನ್ನು ಸೇರಿಸಲು ಮೆಮೋಗೆ ಸಹಿ ಹಾಕಲಾಗಿದೆ. ಪುಣೆ ಮತ್ತು ಮುಂಬೈನ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರ ಸಾಮಾನ್ಯ ವಿಮಾ ಸಾರ್ವಜನಿಕ ವಲಯ ಸಂಘ ಯೊಂದಿಗೆ ಯೋಜನೆಯ ಒಪ್ಪಂದ ಮಾಡಿಕೊಂಡಿದೆ. ಸುಮಾರು 1,000 ಕ್ಕೂ ಹೆಚ್ಚು ಆಸ್ಪತ್ರೆಗಳು ಇದರ ವ್ಯಾಪ್ತಿಗೆ ಬರುತ್ತವೆ" ಎಂದಿದ್ದಾರೆ.