ಬೆಂಗಳೂರು, ಮೇ 02 (Daijiworld News/MB) : ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಒಂದೇ ಕಡೆ ಪ್ರಯಾಣಕ್ಕೆ ನಿಗದಿಯಾಗಿರುವ ದರವನ್ನು ಮಾತ್ರ ಪಡೆಯಬೇಕು, ದುಪ್ಪಟ್ಟು ಪಡೆಯಬಾರದು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ "ಕೆಎಸ್ಆರ್ ಟಿ ಸಿ ಬಸ್ ಗಳ ಮೂಲಕ ತಮ್ಮ-ತಮ್ಮ ಸ್ಥಳಗಳಿಗೆ ಹೋಗಲು ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾದಿರುವ "ಕಾರ್ಮಿಕ" ರಿಗೆ Single Fare ದರದಲ್ಲಿ ಹೋಗಲು ಅನುವು ಮಾಡಿಕೊಡಲು ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ" ಎಂದು ತಿಳಿಸಿದ್ದಾರೆ.
ಶನಿವಾರ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನಿಗದಿಯಾದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ದುಪ್ಪಟ್ಟು ಹಣ ಪಡೆಯಲಾಗುತ್ತಿದ್ದು ಈ ಕುರಿತು ಜನರು ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚರ್ಚೆ ನಡೆಸಿ, ಒಂದೇ ಕಡೆ ಪ್ರಯಾಣಕ್ಕೆ ನಿಗದಿಯಾಗಿರುವ ದರವನ್ನು ಮಾತ್ರ ಪಡೆಯಬೇಕೆಂದು ಸಾರಿಗೆ ಸಂಸ್ಥೆಗೆ ಸೂಚಿಸಿದ್ದಾರೆ.
ಇನ್ನು ವಾಪಾಸ್ ಆಗುವ ದರವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಲಾಗಿದೆ.
ಬಸ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಆದೇಶಿಸಿದೆ.