ನವದೆಹಲಿ, ಮೇ.02 (DaijiworldNews/PY) : ಕೊರೊನಾ ಸೋಂಕು ವ್ಯಾಪಿಸದಂತೆ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಸಹಿತ ಎಲ್ಲಾ ಆರೋಗ್ಯ ವೀರರು ಮತ್ತು ದೇಶದ ನಾಗರಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮೇ. 3ರಂದು ಮೂರು ರಕ್ಷಣಾ ಕಾರ್ಯ ಪಡೆಗಳು ಜಂಟಿಯಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಿವೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಶುಕ್ರವಾರ ಸಂಜೆ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದರು.
ವಾಯುಪಡೆ ವಿಮಾನಗಳಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೂ ಈಶಾನ್ಯದ ಅಸ್ಸಾಂನಿಂದ ಗುಜರಾತ್ನ ಕಚ್ವರೆಗೆ ಗೌರವ ಹಾರಾಟ ನಡೆಯಲಿದೆ. ಇದರೊಂದಿಗೆ ದೇಶದ ಕರಾವಳಿ ತೀರದುದ್ದಕ್ಕೂ ನಿಂತಿರುವ ಹಡಗುಗಳು ದೀಪಗಳನ್ನು ಮುಖಾಂತರ ನೌಕಾ ಪಡೆಯು ವಿಶೇಷವಾದ ಗೌರವ ಸಲ್ಲಿಸಲಿದೆ.
ಹೆಲಿಕಾಪ್ಟರ್ಗಳ ಮೂಲಕ ದೇಶದ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಠಿ ಸುರಿಯುವುದರೊಂದಿಗೆ ಹಲವು ಜಿಲ್ಲೆಗಳಲ್ಲಿನ ವೈದ್ಯಕೀಯ ಕಟ್ಟಡಗಳ ಹೊರಗೆ ಸೇನಾ ಬ್ಯಾಂಡ್ ನುಡಿಸುವ ಮೂಲಕ ಆರೋಗ್ಯ ವೀರರಿಗೆ ವಿಶೇಷವಾದ ಕೃತಜ್ಞತೆಯ ಗೌರವ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.