ನವದೆಹಲಿ, ಮೇ 02 (Daijiworld News/MB) : ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ಈಗಾಗಲೇ ಮಹಿಳಾ ಜನ್ ಧನ್ ಖಾತೆದಾರರಿಗೆ 500 ರೂ.ಗಳನ್ನು ಜಮೆ ಮಾಡಿದ್ದು ಇದೀಗ ಎರಡನೇ ಕಂತಿನ 500 ರೂ.ಗಳನ್ನು ಬ್ಯಾಂಕ್ಗಳು ಮಹಿಳಾ ಜನ ಧನ್ ಖಾತೆಗೆ ರವಾನೆ ಮಾಡಲಿದೆ.
ಕೊರೊನಾ ಲಾಕ್ಡೌನ್ ಇರುವ ಕಾರಣದಿಂದಾಗಿ ಪ್ರಧಾನಿ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಭಾಗವಾಗಿ ಮುಂದಿನ ಮೂರು ತಿಂಗಳವರೆಗೆ ಮುಂದಿನ 3 ತಿಂಗಳವರೆಗೂ ಮಹಿಳಾ ಜನ ಧನ್ ಖಾತೆ ಹೊಂದಿರುವವರಿಗೆ ಪ್ರತಿ ತಿಂಗಳಿಗೆ 500 ರೂ. ಜಮೆ ಮಾಡಲಾಗುತ್ತಿದ್ದು ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಕಾರ್ಯದರ್ಶಿ ದೇಬಾಶಿಶ್ ಪಾಂಡ ಅವರು ಮಹಿಳಾ ಜನ ಧನ್ ಖಾತೆದಾರರಿಗೆ ಮೇ ಕಂತಿನ ಹಣವನ್ನು ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಬ್ಯಾಂಕುಗಳಲ್ಲಿ ಜನಸಂದಣಿಯನ್ನು ತಪ್ಪಿಸಲು, ಜನರು ಹಣವನ್ನು ಹಿಂಪಡೆಯವ ಸಂದರ್ಭದಲ್ಲಿ ನೀಡಲಾದ ಸೂಚನೆಯನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಹಣಕಾಸು ಸೇವಾ ಇಲಾಖೆಯ ಮೇ ತಿಂಗಳಿನ ವಾಪಸಾತಿ ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆ ಸಂಖ್ಯೆ 0 ಮತ್ತು 1 ರಿಂದ ಕೊನೆಗೊಳ್ಳುವ ಖಾತೆ ಹೊಂದಿರುವವರು ಬೆಂಬಲ ಹಣವನ್ನು ಸೋಮವಾರ ಬ್ಯಾಂಕ್ನಿಂದ ಹಿಂಪಡೆಯ ಬಹುದಾಗಿದೆ.
ಹಾಗೆಯೇ 2 ಮತ್ತು 3 ರೊಂದಿಗೆ ಕೊನೆಗೊಳ್ಳುವ ಖಾತೆ ಸಂಖ್ಯೆಗಳನ್ನು ಹೊಂದಿರುವವರು ಮೇ 5 ರಂದು, 4 ಮತ್ತು 5 ಸಂಖ್ಯೆಯಲ್ಲಿ ಕೊನೆಗೊಳ್ಳುವ ಖಾತೆ ಸಂಖ್ಯೆಗಳನ್ನು ಹೊಂದಿರುವವರು ಮೇ 6 ರಂದು, 6 ಮತ್ತು 7 ಸಂಖ್ಯೆಯಲ್ಲಿ ಕೊನೆಗೊಳ್ಳುವ ಖಾತೆ ಸಂಖ್ಯೆಗಳನ್ನು ಹೊಂದಿರುವವರು ಮೇ 8 ರಂದು ಮತ್ತು 8 ಮತ್ತು 9 ಸಂಖ್ಯೆಯಲ್ಲಿ ಕೊನೆಗೊಳ್ಳುವ ಖಾತೆ ಸಂಖ್ಯೆಗಳನ್ನು ಹೊಂದಿರುವವರು ಮೇ 11 ರಂದು ತಮ್ಮ ಮಹಿಳಾ ಜನ್ ಧನ್ ಖಾತೆಯಿಂದ ಹಣವನ್ನು ಹಿಂಪಡೆಬಹುದಾಗಿದ್ದು ಮೇ 11 ರ ನಂತರ ಫಲಾನುಭವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಬ್ಯಾಂಕಿನಲ್ಲಿ ಹಣವನ್ನು ಹಿಂಪಡೆಯಬಹುದಾಗಿದೆ.
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರು ಹಣ ವಾಪಾಸ್ ಪಡೆಯಲು ಬ್ಯಾಂಕ್ನಲ್ಲಿ ಒಮ್ಮೆಲ್ಲೇ ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವಾಪಸಾತಿ ಯೋಜನೆಯನ್ನು ಸರ್ಕಾರ ಏಪ್ರಿಲ್ನಲ್ಲಿ ಮೊದಲ ಕಂತಿನ ಪರಿಹಾರವನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಜಾರಿಗೆ ತಂದಿದೆ.
ಹಾಗೆಯೇ ಫಲಾನುಭವಿಗಳು ಹತ್ತಿರದ ಎಟಿಎಂ, ಬ್ಯಾಂಕ್ ಮಿತ್ರ ಬಳಸಿ 2,000 ವರೆಗೆ ಹಣ ಹಿಂಪಡೆಯಬಹುದು. ಬ್ಯಾಂಕ್ಗಳಲ್ಲಿ ಒಮ್ಮೆಲ್ಲೇ ಜನರು ಸೇರದಂತೆಯೂ ಹಣಕಾಸು ಸಚಿವಾಲಯವು ವಿನಂತಿಸಿದೆ. ಪ್ರಸ್ತುತ ಯಾವುದೇ ಶುಲ್ಕವಿಲ್ಲದೇ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದಾಗಿದೆ.