ನವದೆಹಲಿ, ಮೇ.02 (DaijiworldNews/PY) : ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಸಂಕಷ್ಟಕ್ಕೊಳಗಾಗಿರುವ ನಾನಾ ವಲಯಗಳು ಹಾಗೂ ಕ್ಷೇತ್ರಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎರಡನೇ ಬಾರಿ ಆರ್ಥಿಕ ಉತ್ತೇಜಕ ಪ್ಯಾಕೇಜ್ ಅನ್ನು ರೂಪಿಸುವ ವಿಚಾರವಾಗಿ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಹಾಗೂ ಆರ್ಥಿಕ ಸಚಿವಾಲಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಎರಡನೇ ಬಾರಿ ಆರ್ಥಿಕ ಉತ್ತೇಜಕ ಪ್ಯಾಕೇಜ್ ಅನ್ನು ರೂಪಿಸುವ ವಿಚಾರವಾಗಿ ಪ್ರಧಾನಿ ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರು ಸಭೆ ನಡೆಸಿದ್ದು, ಪ್ರಮುಖ ಆರ್ಥಿಕ ಸಚಿವಾಲಯಗಳಾದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಎಂಎಸ್ಎಂಇ ಮಂತ್ರಿಗಳ ಜೊತೆ ಸಭೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಹಣಕಾಸು ಸಚಿವಾಲಯವು ಮಾಸಿಕ ಜಿಎಸ್ಟಿ ಸಂಗ್ರಹ ಅಂಕಿ ಅಂಶಗಳ ಬಿಡುಗಡೆಯನ್ನು ಮುಂದೂಡಿದ್ದು, ಪ್ರಧಾನಿ ಮಂತ್ರಿ ಅವರಿಗೆ ಭಾರತದ ಆರ್ಥಿಕತೆಯನ್ನು ಉತ್ತೇಜಿಸಲು ತೆಗೆದುಕೊಳ್ಳಲು ಯೋಜಿಸಿರುವ ಹಲವು ಉಪಕ್ರಮಗಳ ಬಗ್ಗೆ ವಿವರವಾಗಿರುವ ಪ್ರಸ್ತುತಿಯನ್ನು ನೀಡಿದೆ. ಶುಕ್ರವಾರದಂದು ಪ್ರಧಾನಿ ಮೋದಿ ಅವರು ನಾಗರಿಕ ವಿಮಾನಯಾನ, ಕಾರ್ಮಿಕ ಮತ್ತು ವಿದ್ಯುತ್ ಸೇರಿದಂತೆ ವಿವಿಧ ಸಚಿವಾಲಯಗಳೊಂದಿಗೆ ನಡೆಸಿದ್ದು, ಶೀಯಾ ಹಾಗೂ ಸಾಗರೋತ್ತರ ಹೂಡಿಕೆಗಳನ್ನು ಆಕರ್ಷಿಸುವ ಹಾಗೂ ದೇಶದಲ್ಲಿ ಸಣ್ಣ ಉದ್ಯಮಗಳ ಪುನರುಜ್ಜೀವನದತ್ತ ಗಮನಹರಿಸುವ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು. ಈ ಸಲುವಾಗಿ ಅವರು ಗುರುವಾರ ವಾಣಿಜ್ಯ ಹಾಗೂ ಎಂಎಸ್ಎಂಇ ಸಚಿವಾಲಯಗಳೊಂದಿಗೆ ಚರ್ಚೆ ನಡೆಸಿದರು.
ಮಾರ್ಚ್ ಅಂತ್ಯದಲ್ಲಿ ಸರ್ಕಾರವು ಆರ್ಥಿಕತೆಯ ತಳಮಟ್ಟದಲ್ಲಿ ಇರುವವರು ಎದುರಿಸುತ್ತಿರುವ ಕಷ್ಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 1.7 ಲಕ್ಷ ಕೋಟಿ ರೂ.ಗಳ ಉತ್ತೇಜಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿತ್ತು. ಇದೀಗ ಸರ್ಕಾರವು ಎರಡನೇ ಹಂತದ ಪರಿಹಾರ ಕ್ರಮಗಳನ್ನು ಹಾಗೂ ಉತ್ತೇಜಕ ಪ್ಯಾಕೇಜ್ ಅನ್ನು ಶೀಘ್ರವೇ ಘೋಷಣೆ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಮಾರ್ಚ್ 25 ರಿಂದ 21 ದಿನಗಳ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿದ್ದು, ಮೇ. 17ರವರೆಗೆ ಲಾಕ್ಡೌನ್ ಅನ್ನು ವಿಸ್ತರಿಸಲಾಗಿದೆ. ದೇಶಾದ್ಯಂತ ಆರ್ಥಿಕ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದು, ವಾಯು ಹಾಗೂ ರೈಲು ಪ್ರಯಾಣವನ್ನೂ ತಟಸ್ಥವಾಗಿಸಿದೆ. ಇದೀಗ ಮೇ. ಮೇ 4 ರಿಂದ, ಗ್ರೀನ್, ಆರೆಂಜ್ ಝೋನ್ಗಳಲ್ಲಿ ಕೈಗಾರಿಕೆಗಳನ್ನು ತೆರೆಯುವುದು ಹಾಗೂ ಕೆಲವು ನಿರ್ಬಂಧಗಳನ್ನೂ ತೆರವುಗೊಳಿಸಲು ತೀರ್ಮಾನಿಸಲಾಗಿದ್ದು, ಆ ಪ್ರದೇಶಗಳಲ್ಲಿ ಪುನಃ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುವ ಸಾಧ್ಯತೆಯಿದೆ.