ಗದಗ, ಮೇ 02 (Daijiworld News/MB) : ತೆಲಂಗಾಣ ರಾಜ್ಯದ ಮರಳು ನೀತಿಯನ್ನು ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ರಾಜ್ಯದಲ್ಲಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು ಜನರಿಗೆ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಲಭ್ಯವಾಗಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸ ಮರಳು ನೀತಿ ಪ್ರಕಾರವಾಗಿ ರೈತರು ಹಳ್ಳ, ತೊರೆ, ಕೆರೆಗಳಲ್ಲಿನ ಮರಳು ನಿಕ್ಷೇಪಗಳನ್ನು ಗ್ರಾಮ ಪಂಚಾಯ್ತಿ ಅನುಮತಿಯೊಂದಿಗೆ ತೆಗೆಯಬಹುದು ಎಂದು ಹೇಳಿದರು.
ಸರ್ಕಾರಿ ಸ್ವಾಮ್ಯದ ನಿಗಮ ಮಂಡಳಿಗಳ ಮೂಲಕ ಗ್ರಾಹಕರಿಗೆ ಜಿಲ್ಲಾ ಮರಳು ಸಮಿತಿ ನಿಗದಿಪಡಿಸಿದ ದರದಲ್ಲಿ ನದಿ, ಆಣೆಕಟ್ಟುಗಳ ಹಿನ್ನೀರಿನ ಪ್ರದೇಶಗಳಲ್ಲಿನ ಮರಳು ನಿಕ್ಷೇಪಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ವಹಿಸುವ ಮನೆ, ರಸ್ತೆ ಕಾಮಗಾರಿಗಳಿಗೆ ಲಘು ವಾಹನ ಮತ್ತು ಎತ್ತಿನ ಗಾಡಿಗಳ ಮೂಲಕ ಮರಳು ಸಾಗಾಣಿಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಈ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಡೆಸಲೆಂದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಹಕರು ಈ ಮೊಬೈಲ್ ಆ್ಯಪ್ ಮೂಲಕವೇ ಮರಳು ಪಡೆಯ ಬಹುದಾಗಿದೆ ಎಂದರು.
ಹಾಗೆಯೇ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಮತ್ತು ಅನಧಿಕೃತ ಖನಿಜ ದಾಸ್ತಾನಿನ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಖನಿಜ ರಕ್ಷಣಾ ಪಡೆ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದರು.