ಶಿವಮೊಗ್ಗ, ಮೇ.02 (DaijiworldNews/PY) : ಕೊರೊನಾ ವಿರುದ್ದದ ಹೋರಾಟವು ದೀರ್ಘ ಕಾಲದ ಕಾರ್ಯಾಚರಣೆಯಾಗಿದ್ದು, ಕೊರೊನಾದೊಂದಿಗೆ ಇನ್ನೂ ಏಳೆಂಟು ತಿಂಗಳು ಬದುಕು ಸಾಗಿಸಬೇಕಿದೆ. ಹಾಗಾಗಿ ಎಲ್ಲರೂ ಮಾನಸಿಕವಾಗಿ ಸಿದ್ದರಿರಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿ
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊರೊನಾ ಹಾಗೂ ಕೆಎಫ್ಡಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನಡೆದಿದೆ. ಈ ಪ್ರಯೋಗವು ಯಶಸ್ವಿಯಾದರೆ ಎಲ್ಲಾ ಜಿಲ್ಲೆಗಳಲ್ಲಿಯೂ ಅನುಸರಿಸಲಾಗುವುದು. ಎಲ್ಲಾ ಜಿಲ್ಲೆಗಳ ರಕ್ತನಿಧಿಗಳಲ್ಲಿಯೂ ರಕ್ತ ಸಂಗ್ರಹ ಕಡಿನೆಯಾಗಿದ್ದು, ನೆರವು ನೀಡಲು ದಾನಿಗಳನ್ನು ಕೋರಲಾಗಿದೆ. ರಕ್ತದಾನ ಶಿಬಿರ ಆಯೋಜಿಸಲೂ ಕೋರಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಂದು ಕೊರೊನಾ ಪ್ರಕರಣವು ಪತ್ತೆಯಾಗಿಲ್ಲ. ಜಿಲ್ಲೆ ಹಸಿರು ವಲಯದಲ್ಲಿದೆ ಎಂಬ ಕಾರಣದಿಂದ ಯಾರೂ ಮೈಮರೆಯಬಾರದು. ಸಾರ್ವಜನಕ ಸ್ಥಳಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ಸಂದರ್ಭ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಗತ್ಯವಿಲ್ಲದ ಸಂದರ್ಭ ಮನೆಯಲ್ಲಿಯೇ ಇರಿ ಎಂದರು.
ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಬಾಕಿ ವೇತನವನ್ನು ಪಾವತಿ ಮಾಡಲು 80 ಕೋಟಿ.ರೂ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ವೈದ್ಯರು ಹಾಗೂ ವಿವಿಧ ಹಂತದ ಸಿಬ್ಬಂದಿ ಮಧ್ಯೆ ಇರುವ ವೇತನದ ತಾರತಮ್ಯವನ್ನು ಸರಿಪಡಿಸಲು ಕ್ರಮ ತೆಗದುಕೊಳ್ಳಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ 842 ವಲಸೆ ಕಾರ್ಮಿಕರಿಗೆ ಜಿಲ್ಲೆಯ 20 ಸ್ಥಳಗಳಲ್ಲಿ ವಸತಿ ಕಲ್ಪಿಸಲಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗಿದೆ. ತಮ್ಮ ಸ್ವಂತ ಊರಿಗೆ ತೆರಳಲು ಬಯಸಿದವರಿಗೆ ಜಿಲ್ಲಾಡಳಿತದ ವೆಚ್ಚದಲ್ಲೇ ಅವರ ಸ್ವಂತ ಊರುಗಳಿಗೆ ಕಳುಹಿಸಲಾಗುತ್ತಿದೆ ಎಂದರು.