ಬೆಂಗಳೂರು, ಮೇ.02 (DaijiworldNews/PY) : ಸರ್ಕಾರಕ್ಕೆ ಹಣ ಬೇಕಾದರೆ ಹೇಳಲಿ ಭಿಕ್ಷೆ ಎತ್ತಿಯಾದರೂ ಕೊಡುತ್ತೇವೆ. ಆದರೆ ಇಂತಹ ಹೊಲಸು ರಾಜಕಾರಣ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸರ್ಕಾರದ ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಬಿಜೆಪಿ ಚಿಹ್ನೆ ವಿರೋಧಿಸಿ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸರ್ಕಾರದ ವತಿಯಿಂದ ಮೀಸಲಿಟ್ಟ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಬಿಜೆಪಿ ನಾಯಕರು ತಮ್ಮ ಹೆಸರಿನ ಪ್ಯಾಕೇಟ್ನಲ್ಲಿ ಹಾಕಿಕೊಂಡು ಹಂಚುತ್ತಿರುವುದು ಅಪರಾಧವಾಗಿದೆ. ಈ ವಿಚಾರವಾಗಿ ಸಂಸದ ಡಿ.ಕೆ ಸುರೇಶ್ ಹಾಗೂ ವಿ.ಎಸ್ ಉಗ್ರಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಎಂ ಅವರೇ ನಾನಿನ್ನು ಈ ವಿಚಾರವಾಗಿ ಮನವಿ ಮಾಡುವುದಿಲ್ಲ. ಮನವಿ ಮಾಡಿಕೊಳ್ಳವ ಕಾಲ ಮುಗಿದಿದೆ. ಈ ಅಕ್ರಮದಲ್ಲಿ ಭಾಗಿಯಾದವರನ್ನು ಶನಿವಾರದೊಳಗಾಗಿ ಬಂಧಿಸಬೇಕು. ಒಂದು ಬಂಧಿಸದಿದ್ದಲ್ಲಿ ಪಕ್ಷದ ವತಿಯಿಂದ ರಸ್ತೆಗಿಳಿದು ಹೋರಾಟ ಮಾಡಬೇಕಾಗುವುದು ಎಂದರು.
ಬಡವರ ಅಕ್ಕಿಯನ್ನು ಕಳೆದ ವಾರ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರುತ್ತಿದ್ದುದನ್ನು ಬಯಲು ಮಾಡಿದ ಬಳಿಕ ಅದನ್ನು ಮುಚ್ಚಿ ಹಾಕಲು ಸರ್ಕಾರದಿಂದ ಸಾಕಷ್ಟು ಪ್ರಯತ್ನ ನಡೆಯಿತು. ಜನರಿಗೆ ಯಾವ ಜಿಲ್ಲೆಯಿಂದ ಎಷ್ಟು ಅಕ್ಕಿ ಹೋಗುತ್ತಿದೆ. ಬಿಜೆಪಿ ನಾಯಕರಿಗೆ ಎಷ್ಟು ಅಕ್ಕಿ ಪಾಲಾಗುತ್ತಿದೆ ಎಂಬುದು ತಮಗೆ ತಿಳಿದಿದೆ. ಈವರೆಗೂ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಪ್ರಕರಣದ ಬಗ್ಗೆ ಒಂದು ಕೇಸ್ ಕೂಡ ದಾಖಲಾಗಿಲ್ಲ ಒಬ್ಬರನ್ನು ಬಂಧಿಸಿಲ್ಲ ಎಂದು ಹೇಳಿದರು.
ನಮ್ಮ ಆರೋಪ ಮುಖ್ಯಮಂತ್ರಿಗಳು ಅಕ್ರಮ ಮಾಡುತ್ತಿದ್ದಾರೆ ಎಂದಲ್ಲ. ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತದಲ್ಲಿ ಹೇಗೆ ಬಡವರ ಅಕ್ಕಿ, ದುಡ್ಡು ದುರುಪಯೋಗವಾಗುತ್ತಿದೆ ಎಂಬುದನ್ನು ಗಮನಕ್ಕೆ ತರಲಾಗಿದೆಯಷ್ಟೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು ಎಂದು ಇಷ್ಟು ದಿನ ಎಲ್ಲವನ್ನೂ ನೋಡಿ ಸುಮ್ಮನಿದ್ದೆವು. ಆದರೆ ಈಗ ವಿಧಿಯಿಲ್ಲ. ಸರ್ಕಾರದ ಆಹಾರವನ್ನು ಈಗಾಗಲೇ ಬಿಜೆಪಿ ನಾಯಕ ಲಿಂಬಾವಳಿ ತಮ್ಮ ಕ್ಷೇತ್ರದಲ್ಲಿ ಅವರ ಫೋಟೋ ಜೊತೆಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮೋದಿ ಅವರ ಫೋಟೋ ಹಾಕಿ ಹಂಚಿಕೆ ಮಾಡುವ ವೀಡಿಯೋವನ್ನು ನಿಮಗೆ ಕಳುಹಿಸಿಕೊಡಲಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಈ ರೀತಿ ಬಿಜೆಪಿಯಿಂದ ಕಾಂಗ್ರೆಸ್ ಶಾಸಕ, ಕಾಂಗ್ರೆಸ್ ಸಂಸದರಿರುವ ಕ್ಷೇತ್ರದಲ್ಲಿ ಅಕ್ರಮ ಆಗುತ್ತಿದೆ ಎಂದರೆ ಇನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಏನಾಗಗುತ್ತಿರಬಹುದು. ನಿಮ್ಮಿಂದ ಇಂತಹ ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸಲು ಸಾಧ್ಯವಿಲ್ಲ. ಇದಕ್ಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದರು.
ವಲಸೆ ಕಾರ್ಮಿಕರಿಗೆ ಒಂದೂವರೆ ತಿಂಗಳಿಂದ ಕೆಲಸ ಮಾಡಬೇಡಿ. ಮನೆಯಿಂದಾಚೆ ಬರಬೇಡಿ ಎಂದು ನಿರ್ದೇಶಿಸಿದ್ದ ಸರ್ಕಾರವೀಗ ಊರಿಗೆ ತೆರಳುವ ವಲಸೆ ಕಾರ್ಮಿಕರಿಂದ ಟಿಕೆಟ್ಗಾಗಿ ದುಪ್ಪಟ್ಟು ಹಣ ಪಡೆದುಕೊಂಡು, ಈಗ ಮಾಮೂಲಿ ದರ ನಿಗದಿ ಮಾಡುವುದಾಗಿ ಹೇಳಿದೆ. ಆ ಬಡ ಕಾರ್ಮಿಕರ ಕೈಯಿಂದ ಹಣಪಡೆದುಕೊಳ್ಳುವಷ್ಟು ಸರ್ಕಾರದ ಖಜಾನೆ ಬಡವಾಗಿದೆಯಾ ಎಂದು ಕೇಳಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಬಿಜೆಪಿಯವರು ಅಂಗನವಾಡಿಗೆ ಹೋಗುವ ಬಡ ಮಕ್ಕಳ ಅನ್ನವನ್ನು ಕದ್ದು ತಿನ್ನುತ್ತಿದ್ದಾರೆ. ಈ ಇಲಾಖೆಯಲ್ಲಿ ಹೆಚ್ಚಾಗಿ ಆಹಾರ ಪದಾರ್ಥ ಉಳಿದಿದ್ದರೆ ಸರ್ಕಾರದ ಹೆಸರಲ್ಲಿ ಬಡವರಿಗೆ ಕೂಲಿ ಕಾರ್ಮಿಕರಿಗೆ ನೀಡಬಹುದಿತ್ತು. ಆದರೆ, ಬಿಜೆಪಿ ನಾಯಕರ ಹೆಸರಿನಲ್ಲಿ ಆಹಾರ ಪದಾರ್ಥಗಳನ್ನು ಹಂಚುವ ಅವಶ್ಯಕತೆ ಏನಿತ್ತು. ನಿಮ್ಮೊಂದಿಗೆ ಹಣ ಇಲ್ಲದಿದ್ದರೆ ಸುಮ್ಮನೆ ಇರಬೇಕಿತ್ತು. ಆದರೆ ಪಕ್ಷದ ಪ್ರಚಾರದ ಸಲುವಾಗಿ ಮಕ್ಕಳು ಹಾಗೂ ಗರ್ಭಿಣಿಯರ ಅನ್ನಕ್ಕೆ ಕೈಹಾಕದ್ದು ಸರಿಯಲ್ಲ. ಸಿಎಂ ಅವರೇ ಈ ರಾಜ್ಯದಲ್ಲಿ ನ್ಯಾಯಾಲಯ ಇದೆಯೇ ಎಂದು ಕೇಳಿದರು.
ಬಿಜೆಪಿ ನಾಯಕರು ಕಳೆದ 15-20 ದಿನಗಳಿಂದ ಸರ್ಕಾರದ ಅಕ್ಕಿ ಬೇಳೆಯನ್ನು ನೀಡಿ ತಾವು ದಾನಶೂರರಂತೆ ಬಿಂಬಿಸಿಕೊಳ್ಳುತ್ತಿರುವುದು ಎಂಬುದು ಗೊತ್ತಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾನ, ಮರ್ಯಾದೆ ಇರುವುದೇ ಆದರೆ ಬಡವರ ಮೇಲೆ ಕಾಳಜಿ ಇದ್ದರೆ ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸುವಂತೆ ತಿಳಿಸಿದರು.
ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮಾತನಾಡಿ, ಈ ಅಕ್ರಮದಲ್ಲಿ ಮುನಿರಾಜು ಎಂಬ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷರು, ಬಿಜೆಪಿಯ ಹಾಲಿ ಸದಸ್ಯರು ಹಾಗೂ ನಾಯಕರು ಸೊಸೈಟಿಯ ಸದಸ್ಯರು ಆರೋಪಿಗಳಾಗಿದ್ದಾರೆ. ಆರೋಪಿತರ ವಿರುದ್ಧ ಜಾಮೀನು ರಹಿತ, ಮ್ಯಾಜಿಸ್ಟ್ರೇಟ್ ಅವರಿಂದ ವಿಚಾರಣೆಗೆ ಒಳಪಡಬಹುದಾದ ಅಪರಾಧದಡಿ ಐಪಿಸಿ 403,406, 420 ಪ್ರಕರಣ ದಾಖಲಿಸಲಾಗಿದೆ. 7 ವರ್ಷ ಜೈಲು ಹಾಗೂ ದಂಡವನ್ನು ಅಪರಾಧಿಗಳಿಗೆ ವಿಧಿಸಬಹುದು. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದನ್ನು ನೋಡಿದರೆ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಯಡಿಯೂರಪ್ಪನವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ ಅವರು ಇದರಲ್ಲಿ ಪಾಲ್ಗೊಂಡಿರುವ ಅನುಮಾನ ಮೂಡುತ್ತಿದೆ ಎಂದು ತಿಳಿಸಿದರು.