ನವದೆಹಲಿ, ಮೇ 03 (Daijiworld News/MB) : ಸುಮಾರು ಒಂದು ತಿಂಗಳುಗಳ ಕಾಲ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಲೋಕಪಾಲದ ಸದಸ್ಯ ನ್ಯಾಯಮೂರ್ತಿ ಅಜಯ್ಕುಮಾರ್ ತ್ರಿಪಾಠಿ (63) ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.
ಚತ್ತೀಸಗಡ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿದ್ದ ತ್ರಿಪಾಠಿ ಏಪ್ರಿಲ್ 2 ರಂದು ಏಮ್ಸ್ಗೆ ದಾಖಲಾಗಿದ್ದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರನ್ನು ಏಮ್ಸ್ ಆವರಣದ ಟ್ರಾಮಾ ಸೆಂಟರ್ಗೆ ಸ್ಥಳಾಂತರಿಸಲಾಗಿತ್ತು.
೧೫ ದಿನಗಳ ಕಾಲ ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದ ಅವರು ಶನಿವಾರ ಕೊನೆಯುಸಿರೆಳೆದಿದ್ದಾರೆ.
ಇನ್ನು ಅವರ ಪುತ್ರಿ ಮತ್ತು ಮನೆಯ ಅಡುಗೆ ಕೆಲಸದಾತನಲ್ಲೂ ಕೊರೊನಾ ಸೋಂಕು ಪತ್ತೆಯಾಗಿದ್ದು ಇಬ್ಬರು ಗುಣಮುಖರಾಗಿದ್ದಾರೆ.
ಕಳೆದ ವರ್ಷ ಮಾರ್ಚ್ 23 ರಂದು ಲೋಕಪಾಲದ ನಾಲ್ವರು ನ್ಯಾಯಾಂಗ ಸದಸ್ಯರ ಪೈಕಿ ಒಬ್ಬರಾಗಿ ತ್ರಿಪಾಠಿ ಅವರನ್ನು ನೇಮಕ ಮಾಡಲಾಗಿತ್ತು.