ನವದೆಹಲಿ, ಮೇ 03 (Daijiworld News/MB) : ಭಾರತೀಯ ಸೇನೆ ಕೊರೊನಾ ವೈರಸ್ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಟ ನಡಸುವವರಿಗೆ ಇಂದು ಗೌರವ ಸಲ್ಲಿಸಲು ಸಜ್ಜಾಗಿದೆ.
ಈ ಕುರಿತು ಶುಕ್ರವಾರ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ, ನೌಕಾಪಡೆಯ ಮುಖ್ಯಸ್ಥ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್. ಬದೌರಿಯಾ ಮೇ 3 ರಂದು ಯುದ್ಧ ವಿಮಾನಗಳ ಮೂಲಕ ಶ್ರೀನಗರದಿಂದ ತಿರುವನಂತಪುರದವರೆಗೆ, ದಿಬ್ರೂಗರ್ನಿಂದ ಕಛ್ವರೆಗೆ ವೈಮಾನಿಕ ಪ್ರದರ್ಶನದ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿ ಮಾಡಲಾಗುವುದು. ನಮ್ಮ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಈ ಮೂಲಕ ಧನ್ಯವಾದ ತಿಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹಾಗೆಯೇ ಭಾನುವಾರ ಬೆಳಿಗ್ಗೆ ದೆಹಲಿಯ ಪೊಲೀಸ್ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದೇಶದಾದ್ಯಂತ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಲು ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಗೌರವ, ಅಭಿನಂದನೆ ಸಲ್ಲಿಸಲಾಗುತ್ತದೆ.
ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೇವಕರಿಗೆ ವೈಮಾನಿಕ ಪ್ರದರ್ಶನ, ಹಡಗುಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸುವುದು, ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಸೇನೆ ಗೌರವ ಸಲ್ಲಿಸಲಿದೆ.
ಬೆಳಿಗ್ಗೆ 10. 30ಕ್ಕೆ ಪಶ್ಚಿಮ ಏರ್ ಕಮಾಂಡ್ನ ಭಾರತೀಯ ವಾಯುಪಡೆಯ (ಐಎಎಫ್) ಫೈಟರ್ ಜೆಟ್ಗಳು ರಾಷ್ಟ್ರ ರಾಜಧಾನಿ ದೆಹಲಿಯದ್ಯಾಂತ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಟಿ ಮಾಡಲಿದ್ದು ಮುಂಬೈನಲ್ಲಿ, ಮಿಲಿಟರಿ ವಿಮಾನಗಳು ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆ ಮತ್ತು ಕಸ್ತೂರಬಾ ಗಾಂಧಿ ಆಸ್ಪತ್ರೆಯ ಮೇಲೆ ಪುಷ್ಪವೃಷ್ಟಿ ಮಾಡಲಿದೆ.