ನವದೆಹಲಿ, ಮೇ 03 (Daijiworld News/MB) : ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ಉದ್ಯೋಗಿಗಳು ಕಡ್ಡಾಯವಾಗಿ ತಮ್ಮ ಮೊಬೈಲ್ಗಳಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕು ಹರಡಿರುವವರನ್ನು ಪತ್ತೆಹಚ್ಚುವ ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿರಬೇಕು ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಂಪೆನಿ ನೌಕರರು ಆರೋಗ್ಯ ಸೇತು ಆಪ್ ಹೊಂದಿರದಿದ್ದಲ್ಲಿ ಆ ಸಂಸ್ಥೆ ಮುಖ್ಯಸ್ಥರು ಹೊಣೆಗಾರರು, ಹಾಗೆಯೇ ಕಂಟೈನ್ ಮೆಂಟ್ ವಲಯಗಳಲ್ಲಿರುವ ಎಲ್ಲರೂ ಕೂಡಾ ಕಡ್ಡಾಯವಾಗಿ ಈ ಆಪ್ನ್ನು ಹೊಂದಿರಬೇಕು. ಸೋಮವಾರದಿಂದ ಕಚೇರಿ ಕಾರ್ಯಕ್ಕೆ ತೆರಳುವ ಯಾರೇ ಆದರೂ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ನ್ನು ಡೌನ್ ಲೋಡ್ ಮಾಡಬೇಕು. ಮನೆಯಲ್ಲಿಯೇ ಕೆಲಸ ಮಾಡುವವರು ಈ ಆಪ್ ಡೌನ್ ಲೋಡ್ ಮಾಡುವುದು ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.
ಈ ಆರೋಗ್ಯ ಸೇತು ಆಪ್ನ್ನು ಕೇಂದ್ರ ಸರ್ಕಾರ ಏಪ್ರಿಲ್ ಆರಂಭದಲ್ಲಿ ಬಿಡುಗಡೆ ಮಾಡಿದ್ದು ಯಾರಿಗೆ ಇಷ್ಟವಿದೆಯೋ ಅವರು ಡೌನ್ಲೋಡ್ ಮಾಡಬಹುದು ಎಂದು ಹೇಳಿತ್ತು. ಈ ಆಪ್ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಬಿಎಸ್ಇ ಯಂತಹ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ಪ್ರೋತ್ಸಾಹ ನೀಡಿದ್ದು ಆ ಬಳಿಕ ಈ ಆಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಆಪ್ ಹೊಂದಿರುವವರ ಸಂಖ್ಯೆ 30 ಕೋಟಿಗೆ ತಲುಪಬೇಕು ಎಂಬುದು ಕೇಂದ್ರ ಸರ್ಕಾರದ ಗುರಿಯಾಗಿದೆ.