ಶ್ರೀನಗರ, ಮೇ.03 (DaijiworldNews/PY) : ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕುಪ್ವಾರಾ ಜಿಲ್ಲೆಯ ಚಂದಿಮುಲ್ಲಾದಲ್ಲಿರುವ ಜನರನ್ನು ಒತ್ತೆಯಾಳುಗಳಾಗಿ ಮಾಡಿಕೊಳ್ಳಲು ಉಗ್ರರು ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಚರಣೆ ಪ್ರಾರಂಭಿಸಿದರು. ಈ ಸಂದರ್ಭ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಇದೀಗ ಭದ್ರತಾ ಪಡೆಗಳು ಉಗ್ರರ ಬಳಿ ಒತ್ತೆಯಾಳುಗಳಾಗಿದ್ದ ನಾಗರೀಕರನ್ನು ಸುರಕ್ಷತವಾಗಿ ಕರೆತಂದಿದ್ದು, ಈ ಸಂದರ್ಭ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಸದೆಬಡೆದಿದೆ ಎಂದು ತಿಳಿದುಬಂದಿದೆ.