ಗ್ವಾಲಿಯಾರ್, ಮೇ 03 (Daijiworld News/MB) : ಮಾಜಿ ಸಚಿವ ಪ್ರದ್ಯುಮ್ನ ಸಿಂಗ್ ತೋಮರ್ ಅವರ ಪುತ್ರ ರಿಪುದಮನ್ ಕೊರೊನಾ ಲಾಕ್ಡೌನ್ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರಿಗೆ ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡಿದೆ. ಈ ಬೆನ್ನಲ್ಲೇ ತಂದೆ ಪ್ರದ್ಯುಮ್ನ ಸಿಂಗ್ ತೋಮರ್ ಅವರು ಮಗನಿಗೆ ರಸ್ತೆಯಲ್ಲಿ ಕಸಗುಡಿಸುವ ಶಿಕ್ಷೆ ನೀಡಿದ್ದಾರೆ.
ಮಾಸ್ಕ್ ಧರಿಸದೆಯೇ ಬೈಕ್ನಲ್ಲಿ ಸಂಚಾರ ಮಾಡುತ್ತಿದ್ದ ಆತನನ್ನು ಪೊಲೀಸರು ತಡೆದಿದ್ದು ಈ ಸಂದರ್ಭದಲ್ಲಿ ಪೊಲೀಸರ ಬೆದರಿಕೆ ಹಾಕಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈ ಮೊದಲು ವೈರಲ್ ಆಗಿದ್ದು ಈ ಬಗ್ಗೆ ಮಾಹಿತಿ ತಿಳಿದ ಮಾಜಿ ಸಚಿವ ಪ್ರದ್ಯುಮ್ನ ಅವರು ಸಂಜೆ ವೇಳೆಗೆ ಅದೇ ಜಾಗಕ್ಕೆ ಮಗನನ್ನು ಕರೆದೊಯ್ದು ಆತನಿಂದ 100 ರೂ. ದಂಡ ಕಟ್ಟಿಸಿ ಮಗನ ಪರವಾಗಿ ಕ್ಷಮೆ ಕೇಳಿದ್ದರು.
ಕ್ಷಮೆ ಕೇಳುವ ವಿಡಿಯೋ ಕೂಡಾ ವೈರಲ್ ಆಗಿದ್ದು ತನ್ನ ಮಗನಿಗೆ ರಸ್ತೆ ಗುಡಿಸುವ ಶಿಕ್ಷೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಇದು ರಾಜಕೀಯವಾಗಿ ಹೆಗ್ಗಳಿಕೆಗೆ ಬೇಕಾಗಿ ಮಾಡಿದ ಯತ್ನ ಎಂದು ಆರೋಪ ಮಾಡಿದ್ದು ಪ್ರದ್ಯುಮ್ನ ಸಿಂಗ್ ಮಗ ತಪ್ಪು ಮಾಡಿದ್ದಾನೆ ಅದಕ್ಕೆ ಶಿಕ್ಷೆ ನೀಡಿದ್ದೇನೆ ಎಂದು ಹೇಳಿದ್ದಾರೆ.