ಬೆಂಗಳೂರು, ಮೇ 03 (Daijiworld News/MB) : ಕೇಂದ್ರ ಸರ್ಕಾರ ಕರ್ನಾಟಕದ ಮೂರು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಿದ್ದು ಈ ಬಗ್ಗೆ ಮರುಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಕೆಂಪು ವಲಯ ಎಂದು ಗುರುತಿಸಿರುವ ಬೆಂಗಳೂರು ಗ್ರಾಮಾಂತರವನ್ನು ಹಸಿರು ವಲಯವೆಂದು ಕೆಂಪು ವಲಯದಲ್ಲಿರುವ ಮೈಸೂರನ್ನು ಆರೆಂಜ್ ವಲಯವೆಂದು ಮರು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ರೆಡ್ ಝೋನ್ಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು ಆರು ಜನರಲ್ಲಿ ಸೋಂಕು ದೃಢವಾಗಿದ್ದು ಅವರೆಲ್ಲರೂ ಗುಣಮುಖರಾಗಿದ್ದಾರೆ. 88 ಪ್ರಕರಣಗಳಿರುವ ಮೈಸೂರಿನಲ್ಲೂ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು 24 ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರವನ್ನು ಹಸಿರು ವಲಯವೆಂದು ಕೆಂಪು ವಲಯದಲ್ಲಿರುವ ಮೈಸೂರನ್ನು ಆರೆಂಜ್ ವಲಯವೆಂದು ಮರು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಲಾಗುವುದು ಎಂದು ಹೇಳಿದರು.
ಇನ್ನು ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಹಲವು ಜಿಲ್ಲೆಗಳ ಒಟ್ಟು ಜನಸಂಖ್ಯೆಯಷ್ಟು ಅಂದರೆ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇರುವ ಬೆಂಗಳೂರು ರೆಡ್ ಝೋನ್ ಆಗಿದೆ. ಇಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭಕ್ಕೆ ಸರ್ಕಾರ ಅತೀವ ಆಸಕ್ತಿ ಹೊಂದಿದೆ. ಕೊರೊನಾ ಪ್ರಕರಣಗಳು ಕೆಲವು ಪ್ರದೇಶದಲ್ಲಿ ಮಾತ್ರ ಹೆಚ್ಚಾಗಿರುವಾಗ ಇಡೀ ಬೆಂಗಳೂರು ನಗರವನ್ನು ರೆಡ್ ಝೋನ್ ಮಾಡುವುದು ಸರಿಯಲ್ಲ ಎಂದು ಅನಿಸುತ್ತಿದ್ದು ಬೆಂಗಳೂರನ್ನು 5 ಭಾಗಗಳಾಗಿ ಮಾಡಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳನ್ನು ರೆಡ್ ಜೋನ್ ವಲಯ ಎಂದು ಗುರುತಿಸಬಹುದು ಎಂದು ಹೇಳಿದರು.
ಈಗಾಗಲೇ ರಾಜ್ಯ ಸರ್ಕಾರವು ಕಂಟೈನ್ ಮೆಂಟ್ ಪ್ರದೇಶದ ಹೊರವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮರು ಆರಂಭಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ.